ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ ಖಂಡಿಸಿ ಬೆಂಬಲಿಗರಿಂದ ಪ್ರತಿಭಟನೆ

 ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ ಖಂಡಿಸಿ ಬೆಂಬಲಿಗರಿಂದ ಪ್ರತಿಭಟನೆ


ಬೆಂಗಳೂರು: ರಾಜಕೀಯ ಪ್ರೇರಿತವಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ ಎಂದು ಆರೋಪಿಸಿ ಅವರ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.


ಶುಕ್ರವಾರ ನಗರದ ಫ್ರೀಡಂ ಪಾರ್ಕ್ ನಲ್ಲಿ ಸತೀಶ್ ಜಾರಕಿಹೊಳಿ ಅಭಿಮಾನಿ ಸಂಘದ ಹೂದಿಗೆರೆ ರಮೇಶ್ ಹಾಗೂ ಕೆಪಿಸಿಸಿ ಕಾನೂನು ಘಟಕದ ಕಾರ್ಯಾಧ್ಯಕ್ಷ ಅನಂತ್ ನಾಯ್ಕ್ ನೇತೃತ್ವದಲ್ಲಿ ಪ್ರತಿಭಟಿಸಿದ ಸಚಿವ ಸತೀಶ್ ಜಾರಕಿಹೊಳಿ ಬೆಂಬಲಿಗರು ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುತ್ತಾರೆ ಎಂಬ ಭೀತಿಯಿಂದ ರಾಜಕೀಯ ಪ್ರೇರಿತವಾಗಿ ಇಡಿ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದರು.


ಕೇಂದ್ರ ಸರ್ಕಾರ ಈ ರೀತಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿರುವುದು ಖಂಡನೀಯ. ಸತೀಶ್ ಜಾರಕಿಹೊಳಿ ಮಾನವ ಬಂಧುತ್ವ ವೇದಿಕೆಯ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗುವ ಸಾವಿರಾರು ವಿದ್ಯಾರ್ಥಿಗಳಿಗೆ ನೆರವು ನೀಡಿದ್ದಾರೆ. ಹೀಗೆ ಹತ್ತು ಹಲವು ಸಮಾಜ ಸುಧಾರಣೆಯಲ್ಲಿ ತೊಡಗಿರುವ ಅವರ ಏಳ್ಗೆಯನ್ನು ಸಹಿಸದೆ ಅವರನ್ನು ರಾಜಕೀಯವಾಗಿ ಹತ್ತಿಕ್ಕಲು ಯತ್ನಿಸುತ್ತಿರುವುದು ಖಂಡನೀಯ ಎಂದು ಹೇಳಿದರು.


ಪ್ರತಿಭಟನೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ನಾಯಕರ ವಿರುದ್ಧ ಮೋದಿ ಸರ್ಕಾರ ಅಡ್ಡದಾರಿಯಲ್ಲಿ ನಡೆಸುತ್ತಿರುವ ರಾಜಕೀಯ ಪ್ರೇರಿತ ದುರುದ್ದೇಶಪೂರಿತ ದಾಳಿಗಳು ಸವೆದು ಹೋದ ತಂತ್ರವಷ್ಟೇ. ಇಂತಹ ಕೃತ್ಯಗಳು ಕನ್ನಡಿಗರ ಸೇವೆ ಮಾಡುವ ನಮ್ಮ ಸಂಕಲ್ಪವನ್ನು ಎಂದಿಗೂ ಕುಗ್ಗಿಸಲು ಅಥವಾ ಹೆದರಿಸಲು ಸಾಧ್ಯವಿಲ್ಲ ಎಂದು ಟೀಕಿಸಿದರು.


ಪರಿಶಿಷ್ಟ ಪಂಗಡದ ಪ್ರಭಾವಿ ನಾಯಕರಾದ ಸತೀಶ್ ಜಾರಕಿಹೊಳಿ ಅವರ ಮೇಲಿನ ರಾಜಕೀಯ ದಾಳಿ ಹಾಗೂ ಇಡಿ ದಾಳಿಗಳು, ಸೋಲಿನ ಭೀತಿಯಲ್ಲಿರುವ ಬಿಜೆಪಿ ನಡೆಸುತ್ತಿರುವ ರಾಜಕೀಯ ಸೇಡಿನ ರಾಜಕಾರಣಕ್ಕೆ ಮತ್ತೊಂದು ಪ್ರತ್ಯಕ್ಷ ಉದಾಹರಣೆಯಾಗಿದೆ. ಕಾಂಗ್ರೆಸ್ ಎಂದಿಗೂ ತಲೆಬಾಗುವುದಿಲ್ಲ, ನಾವು ಯಾವುದಕ್ಕೂ ಅಂಜುವುದಿಲ್ಲ. ಕಾಂಗ್ರೆಸ್ ಗ್ಯಾರಂಟಿಗಳನ್ನು, ಜನಸೇವೆಯನ್ನು ನಿರಂತರವಾಗಿ ಮುನ್ನಡೆಸಿಕೊಂಡು ಹೋಗುತ್ತೇವೆ ಎಂದು ಎಚ್ಚರಿಸಿದರು.


ಕೆಪಿಸಿಸಿ ಕಾನೂನು ಘಟಕದ ಕಾರ್ಯಾಧ್ಯಕ್ಷ ಅನಂತ್ ನಾಯ್ಕ್ ಮಾತನಾಡಿ, ಸತೀಶ್ ಜಾರಕಿಹೊಳಿ ಅವರ ಜನಪ್ರಿಯತೆ ಹಾಗೂ ರಾಜಕೀಯ ಬೆಳವಣಿಗೆಯನ್ನು ಸಹಿಸಲಾಗದೆ ಕೇಂದ್ರ ಸರಕಾರ ಇಡಿ ದಾಳಿ ನಡೆಸಿದೆ. ತನಿಖಾ ಸಂಸ್ಥೆಗಳನ್ನು ರಾಜಕೀಯ ದ್ವೇಷ ಸಾಧನೆಗೆ ಬಳಸಿಕೊಳ್ಳುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ /ಎಸ್‌ಟಿ ನೌಕರರ ಸಮನ್ವಯ ಸಮಿತಿ (ರಿ) ಹಾಗೂ ಕರ್ನಾಟಕ ರಾಜ್ಯ 'ಗ್ರಾಮೀಣಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯ ಎಸ್‌ಸಿ / ಎಸ್‌ಟಿ ಅಧಿಕಾರಿಗಳು ಮತ್ತು ನೌಕರರುಗಳ ಸಂಘದ ಜಂಟಿ ಪತ್ರಿಕಾ ಹೇಳಿಕೆ