ಜಯನಗರದಲ್ಲಿ 44 ಸಾವಿರ ಎಸ್‌ಐಆರ್ ನೋಟಿಸ್ ಅರ್ಹ ಮತದಾರರ ಹೆಸರು ಕೈತಪ್ಪದಂತೆ ವಿಶೇಷ ಶಿಬಿರ: ರಮೇಶ್ ಕೆ.ಎನ್.

 

ಜಯನಗರದಲ್ಲಿ 44 ಸಾವಿರ ಎಸ್‌ಐಆರ್ ನೋಟಿಸ್

ಅರ್ಹ ಮತದಾರರ ಹೆಸರು ಕೈತಪ್ಪದಂತೆ ವಿಶೇಷ ಶಿಬಿರ: ರಮೇಶ್ ಕೆ.ಎನ್.

**ಬೆಂಗಳೂರು:** ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಹಿನ್ನೆಲೆಯಲ್ಲಿ ಅರ್ಹ ಮತದಾರರೊಬ್ಬರೂ ಮತದಾರರ ಪಟ್ಟಿಯಿಂದ ಕೈತಪ್ಪದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಜಯನಗರ ವಿಧಾನಸಭಾ ಕ್ಷೇತ್ರವೊಂದರಲ್ಲೇ ಸುಮಾರು 44 ಸಾವಿರ ನೋಟಿಸ್‌ಗಳನ್ನು ನೀಡಲಾಗಿದ್ದು, ನೋಟಿಸ್‌ ಪಡೆದವರು ನಿಗದಿತ ವಿಚಾರಣೆಗೆ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ದಕ್ಷಿಣ ನಗರಪಾಲಿಕೆ ಆಯುಕ್ತ ರಮೇಶ್ ಕೆ.ಎನ್. ಮನವಿ ಮಾಡಿದರು.

ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ನಡೆದ ಎಸ್‌ಐಆರ್ ವಿಶೇಷ ಅಭಿಯಾನ ಹಾಗೂ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಪ್ರತಿಯೊಬ್ಬರೂ ಪರಿಶೀಲಿಸಿಕೊಳ್ಳಬೇಕು. ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ನಾಗರಿಕರು ನಮೂನೆ–6 ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿಕೊಳ್ಳಬೇಕು ಎಂದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ 2002ರ ಮತದಾರರ ಪಟ್ಟಿಯ ವಿವರಗಳನ್ನು ಸರಿಯಾಗಿ ನೀಡದಿರುವುದು, ಹೆಸರು ಅಥವಾ ವಯಸ್ಸಿನಲ್ಲಿ ವ್ಯತ್ಯಾಸ, ತಂದೆ–ಮಗನ ವಯಸ್ಸಿನ ಅಸಂಗತತೆ ಸೇರಿದಂತೆ ವಿವಿಧ ಕಾರಣಗಳಿಂದ ಕೆಲವರಿಗೆ ನೋಟಿಸ್ ನೀಡಲಾಗಿದೆ. ನೋಟಿಸ್‌ ಪಡೆದವರು ಆತಂಕಪಡುವ ಅಗತ್ಯವಿಲ್ಲ. ನಿಗದಿತ ದಿನಾಂಕದಂದು ವಿಚಾರಣೆಗೆ ಹಾಜರಾಗಿ ತಮ್ಮ ಬಳಿ ಇರುವ ಪೂರಕ ದಾಖಲೆಗಳನ್ನು ಸಲ್ಲಿಸಬೇಕು ಎಂದು ಹೇಳಿದರು.

ದಕ್ಷಿಣ ನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟಾರೆ ಸುಮಾರು 4.61 ಲಕ್ಷ ನೋಟಿಸ್‌ಗಳು ಸೃಷ್ಟಿಯಾಗಿದ್ದು, ಈ ಪೈಕಿ ಸುಮಾರು ಶೇ.50ರಷ್ಟು ಪ್ರಕರಣಗಳಲ್ಲಿ ಈಗಾಗಲೇ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದೆ. ಉಳಿದ ಪ್ರಕರಣಗಳಿಗೂ ನಿಗದಿತ ದಿನಾಂಕದಂದು ವಿಚಾರಣೆ ನಡೆಸಲಾಗುವುದು. ತಲುಪದಿರುವ ನೋಟಿಸ್‌ಗಳ ಬಗ್ಗೆಯೂ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಭಾರತೀಯ ನಾಗರಿಕರಾಗಿದ್ದು, 18 ವರ್ಷ ಪೂರ್ಣಗೊಂಡಿರುವುದು ಹಾಗೂ ಸಂಬಂಧಪಟ್ಟ ಪ್ರದೇಶದಲ್ಲಿ ಸಾಮಾನ್ಯ ನಿವಾಸಿಯಾಗಿರುವುದು ಮತದಾರರಾಗಿ ನೋಂದಣಿಗೆ ಪ್ರಮುಖ ಅರ್ಹತೆಗಳಾಗಿವೆ. 2002ರ ಮತದಾರರ ಪಟ್ಟಿಗೆ ಸಂಬಂಧಿಸಿದ ದಾಖಲೆ ಇಲ್ಲದಿದ್ದರೂ, ಅರ್ಹತೆಯನ್ನು ದೃಢಪಡಿಸುವ ಸೂಕ್ತ ದಾಖಲೆಗಳನ್ನು ಸಲ್ಲಿಸಿದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

### *ಅರ್ಹ ಮತದಾರರು ಕೈತಪ್ಪದಂತೆ ಶಿಬಿರ*

ದಕ್ಷಿಣ ವಲಯದ ವಿವಿಧ ಮತಗಟ್ಟೆಗಳಲ್ಲಿ ಸೆ.19 ಮತ್ತು 20ರಂದು ವಿಶೇಷ ಮತದಾರರ ನೋಂದಣಿ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ದಕ್ಷಿಣ ವಲಯದ ಜಂಟಿ ಆಯುಕ್ತೆ ಡಾ. ಮಧು ಪಾಟೀಲ್ ತಿಳಿಸಿದರು.

ಶಿಬಿರಗಳಲ್ಲಿ ಹೊಸದಾಗಿ ಮತದಾರರಾಗಿ ನೋಂದಾಯಿಸಿಕೊಳ್ಳಲು ನಮೂನೆ–6 ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮತದಾರರ ಪಟ್ಟಿಗೆ ಸಂಬಂಧಿಸಿದ ಗೊಂದಲ, ಅನುಮಾನ ಅಥವಾ ಸ್ಪಷ್ಟೀಕರಣಗಳಿದ್ದಲ್ಲಿ ಸ್ಥಳದಲ್ಲಿರುವ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಹಾಗೂ ಮಾರ್ಗದರ್ಶನ ಪಡೆಯಬಹುದು ಎಂದರು.

ಅರ್ಹ ನಾಗರಿಕರು ಶಿಬಿರದ ಸದುಪಯೋಗ ಪಡೆದುಕೊಂಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಹೆಸರು ಇಲ್ಲದಿದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಆಯುಕ್ತ ರಾಚಪ್ಪ, ಉಪ ಆಯುಕ್ತೆ ಗಗನಾ, ಕಂದಾಯ ಅಧಿಕಾರಿ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಾಧಿಕಾರಿ ಡಾ. ಈಶ್ವರ್ ಎಸ್. ರಾಯುಡು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ /ಎಸ್‌ಟಿ ನೌಕರರ ಸಮನ್ವಯ ಸಮಿತಿ (ರಿ) ಹಾಗೂ ಕರ್ನಾಟಕ ರಾಜ್ಯ 'ಗ್ರಾಮೀಣಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯ ಎಸ್‌ಸಿ / ಎಸ್‌ಟಿ ಅಧಿಕಾರಿಗಳು ಮತ್ತು ನೌಕರರುಗಳ ಸಂಘದ ಜಂಟಿ ಪತ್ರಿಕಾ ಹೇಳಿಕೆ