1,000 ಹೊಸ ಆರಂಭಗಳು: ತಲಸೇಮಿಯಾ ಬಾಧಿತ ಮಕ್ಕಳಿಗೆ ಆಶಾಕಿರಣವಾದ DKMS–ಸಂಕಲ್ಪ ಸಹಭಾಗಿತ್ವ

1,000 ಹೊಸ ಆರಂಭಗಳು: ತಲಸೇಮಿಯಾ ಬಾಧಿತ ಮಕ್ಕಳಿಗೆ ಆಶಾಕಿರಣವಾದ DKMS–ಸಂಕಲ್ಪ ಸಹಭಾಗಿತ್ವ

1,000 ಮಕ್ಕಳ ಕಾಂಡಕೋಶ ಕಸಿ ಮೈಲಿಗಲ್ಲು ಸಾಧನೆ; ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ವಿಶೇಷ ಆಚರಣೆ

ಬೆಂಗಳೂರು, ಸೆಪ್ಟೆಂಬರ್ 4, 2026: ತಲಸೇಮಿಯಾ ಸೇರಿದಂತೆ ತೀವ್ರ ಅನುವಂಶಿಕ ರಕ್ತ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲೊಂದು ದಾಖಲಾಗಿದೆ. ಸಂಕಲ್ಪ ಇಂಡಿಯಾ ಫೌಂಡೇಶನ್ 1,000 ಮಕ್ಕಳಿಗೆ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟೇಶನ್ (ಕಾಂಡಕೋಶ ಕಸಿ) ಯಶಸ್ವಿಯಾಗಿ ನೆರವೇರಿಸಿದ್ದು, ಸಾವಿರಾರು ಕುಟುಂಬಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದೆ.

ಈ ಸಾಧನೆಯನ್ನು “1,000 ಹೊಸ ಆರಂಭಗಳು” ಎಂಬ ಪರಿಕಲ್ಪನೆಯಡಿ ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ಆಚರಿಸಲಾಗುತ್ತಿದೆ. ಸಂಕಲ್ಪ ಇಂಡಿಯಾ ಫೌಂಡೇಶನ್, ಅಂತಾರಾಷ್ಟ್ರೀಯ ಲಾಭರಹಿತ ಸಂಸ್ಥೆ DKMS ಹಾಗೂ ವೈದ್ಯಕೀಯ ಮತ್ತು ಜ್ಞಾನ ಪಾಲುದಾರ ಸಂಸ್ಥೆ ಕ್ಯೂರ್2ಚಿಲ್ಡ್ರನ್ ಫೌಂಡೇಶನ್ ನಡುವಿನ ದಶಕಕ್ಕೂ ಅಧಿಕ ಕಾಲದ ಸಹಭಾಗಿತ್ವದ ಪ್ರಮುಖ ಸಾಧನೆಯಾಗಿ ಈ ಮೈಲಿಗಲ್ಲು ಗುರುತಿಸಿಕೊಂಡಿದೆ.

ತೀವ್ರ ತಲಸೇಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ನಿಯಮಿತ ರಕ್ತಪೂರಣ ಮತ್ತು ದೀರ್ಘಕಾಲದ ಚಿಕಿತ್ಸೆಯ ಅವಲಂಬನೆಯಿಂದ ಹೊರಬಂದು ಆರೋಗ್ಯಕರ ಜೀವನ ನಡೆಸುವ ಅವಕಾಶವನ್ನು ಈ ಟ್ರಾನ್ಸ್‌ಪ್ಲಾಂಟೇಶನ್ ಕಾರ್ಯಕ್ರಮ ಒದಗಿಸುತ್ತಿದೆ.

820ಕ್ಕೂ ಹೆಚ್ಚು ಮಕ್ಕಳ ಚಿಕಿತ್ಸೆಗೆ DKMS ನೆರವು

ಸಂಕಲ್ಪ ಇಂಡಿಯಾ ಫೌಂಡೇಶನ್ ಮೂಲಕ ನೆರವೇರಿಸಲಾದ 1,000 ಟ್ರಾನ್ಸ್‌ಪ್ಲಾಂಟ್‌ಗಳಲ್ಲಿ 820ಕ್ಕೂ ಹೆಚ್ಚು ಮಕ್ಕಳ ಚಿಕಿತ್ಸಾ ವೆಚ್ಚಕ್ಕೆ DKMS ನೆರವು ನೀಡಿದೆ.

ವರ್ಷಗಳ ಅವಧಿಯಲ್ಲಿ ಈ ಸಹಭಾಗಿತ್ವವು ಕೇವಲ ಪ್ರತ್ಯೇಕ ಟ್ರಾನ್ಸ್‌ಪ್ಲಾಂಟ್‌ಗಳಿಗೆ ಆರ್ಥಿಕ ನೆರವು ನೀಡುವುದಕ್ಕೆ ಸೀಮಿತವಾಗದೆ, ತಲಸೇಮಿಯಾ ಆರೈಕೆ, ಟ್ರಾನ್ಸ್‌ಪ್ಲಾಂಟೇಶನ್ ಮೂಲಸೌಕರ್ಯ, ರೋಗನಿರ್ಣಯ, ತಜ್ಞರ ತರಬೇತಿ ಹಾಗೂ ವೈದ್ಯಕೀಯ ಸಂಶೋಧನೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ವಿಸ್ತರಿಸಿದೆ.

DKMS ಜಾಗತಿಕ ಸಿಇಒ ಡಾ. ಎಲ್ಕೆ ನೊಯ್ಜಾರ್ ಮಾತನಾಡಿ, “1,000 ಟ್ರಾನ್ಸ್‌ಪ್ಲಾಂಟ್‌ಗಳ ಸಾಧನೆ ದೀರ್ಘಕಾಲೀನ ಸಹಭಾಗಿತ್ವದಿಂದ ಏನು ಸಾಧ್ಯ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಸಂಕಲ್ಪ ಸಂಸ್ಥೆ ಸ್ಥಳೀಯ ನೈಪುಣ್ಯತೆ ಮತ್ತು ಬದ್ಧತೆಯನ್ನು ತರುತ್ತಿದ್ದರೆ, ಕ್ಯೂರ್2ಚಿಲ್ಡ್ರನ್ ಪ್ರಮುಖ ವೈದ್ಯಕೀಯ ಜ್ಞಾನವನ್ನು ನೀಡುತ್ತಿದೆ. DKMS ಹೆಚ್‌ಎಲ್‌ಎ ಟೈಪಿಂಗ್, ಟ್ರಾನ್ಸ್‌ಪ್ಲಾಂಟೇಶನ್, ರೋಗಿಗಳ ಬೆಂಬಲ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ತನ್ನ ಅನುಭವವನ್ನು ನೀಡುತ್ತಿದೆ,” ಎಂದು ಹೇಳಿದರು.

“ನಾವು ಒಟ್ಟಾಗಿ ರೋಗಿಯ ಚಿಕಿತ್ಸಾ ಪಯಣದಲ್ಲಿ ಎದುರಾಗುವ ವಿವಿಧ ಅಡೆತಡೆಗಳನ್ನು ನಿವಾರಿಸಿ, ಸುಸ್ಥಿರ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದೇವೆ. ಸ್ಥಳೀಯವಾಗಿ ಬಲಿಷ್ಠ ಪಾಲುದಾರರೊಂದಿಗೆ ಸೇರಿ ದೇಶದಲ್ಲಿಯೇ, ದೇಶಕ್ಕಾಗಿ ದೀರ್ಘಕಾಲೀನ ಪರಿಹಾರಗಳನ್ನು ರೂಪಿಸುವುದೇ ಈ ಸಹಭಾಗಿತ್ವದ ನಿಜವಾದ ಉದ್ದೇಶ,” ಎಂದು ಅವರು ತಿಳಿಸಿದರು.

2015ರಲ್ಲಿ ಆರಂಭವಾದ ಪಯಣ

ಸಂಕಲ್ಪ ಇಂಡಿಯಾ ಫೌಂಡೇಶನ್ 2015ರಲ್ಲಿ ಕ್ಯೂರ್2ಚಿಲ್ಡ್ರನ್ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಮಕ್ಕಳ ಮೂಳೆ ಮಜ್ಜೆ ಕಸಿ ಕಾರ್ಯಕ್ರಮವನ್ನು ಆರಂಭಿಸಿತು. ಅದೇ ವರ್ಷ ಉಚಿತ ಹೆಚ್‌ಎಲ್‌ಎ ಟೈಪಿಂಗ್ ಮೂಲಕ DKMS ಜೊತೆಗಿನ ಸಹಯೋಗಕ್ಕೂ ಚಾಲನೆ ದೊರೆಯಿತು.

ಅಂದಿನಿಂದ ಈ ಕಾರ್ಯಕ್ರಮ ನಿರಂತರವಾಗಿ ವಿಸ್ತರಿಸುತ್ತಾ ಬಂದಿದೆ. DKMS ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಉಚಿತ ಹೆಚ್‌ಎಲ್‌ಎ ಟೈಪಿಂಗ್, ತಲಸೇಮಿಯಾ ನಿರ್ವಹಣೆ ಹಾಗೂ ಟ್ರಾನ್ಸ್‌ಪ್ಲಾಂಟೇಶನ್ ವೆಚ್ಚಗಳಿಗೆ ನೆರವು ನೀಡುತ್ತಿದೆ. ಜೊತೆಗೆ ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ವಿಶೇಷ ಮಕ್ಕಳ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಸಾಮರ್ಥ್ಯ ಹಾಗೂ ಮೊಲಿಕ್ಯುಲರ್ ಡಯಾಗ್ನೋಸ್ಟಿಕ್ಸ್ ಅಭಿವೃದ್ಧಿಗೂ ಸಂಸ್ಥೆ ಹೂಡಿಕೆ ಮಾಡಿದೆ.

ಈ ಸಹಭಾಗಿತ್ವದ ಮೂಲಕ ನರ್ಸ್‌ಗಳು ಮತ್ತು ಆರೋಗ್ಯ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದ್ದು, 2025ರಿಂದ ವೈದ್ಯಕೀಯ ಸಂಶೋಧನೆಯ ಕ್ಷೇತ್ರದಲ್ಲಿಯೂ ಸಂಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ.

“ಪ್ರತಿ ಟ್ರಾನ್ಸ್‌ಪ್ಲಾಂಟ್ ಒಂದು ಹೊಸ ಆರಂಭ”

ಸಂಕಲ್ಪ ಇಂಡಿಯಾ ಫೌಂಡೇಶನ್ ಅಧ್ಯಕ್ಷ ರಜತ್ ಕುಮಾರ್ ಅಗರ್ವಾಲ್ ಮಾತನಾಡಿ, “ನಮ್ಮ ಪಾಲಿಗೆ ಈ 1,000 ಟ್ರಾನ್ಸ್‌ಪ್ಲಾಂಟ್‌ಗಳು 1,000 ಹೊಸ ಆರಂಭಗಳು. ಪ್ರತಿಯೊಂದು ಮಗು ಮತ್ತು ಕುಟುಂಬಕ್ಕೆ ಟ್ರಾನ್ಸ್‌ಪ್ಲಾಂಟೇಶನ್ ಹೊಸ ಮತ್ತು ಉಜ್ವಲ ಭವಿಷ್ಯದ ಆರಂಭವಾಗಬಹುದು,” ಎಂದು ಹೇಳಿದರು.

“ನಮ್ಮ ಗುರಿ ಕೇವಲ ಪ್ರತ್ಯೇಕ ಟ್ರಾನ್ಸ್‌ಪ್ಲಾಂಟ್‌ಗಳನ್ನು ನಡೆಸುವುದಾಗಿರಲಿಲ್ಲ. ರೋಗ ತಡೆಗಟ್ಟುವಿಕೆ, ಸಮಗ್ರ ತಲಸೇಮಿಯಾ ಆರೈಕೆ, ಸೂಕ್ತ ದಾನಿಗಳ ಗುರುತಿಸುವಿಕೆ ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಒಂದೇ ವ್ಯವಸ್ಥೆಯಡಿ ಜೋಡಿಸುವುದು ನಮ್ಮ ಆಶಯವಾಗಿದೆ,” ಎಂದು ಅವರು ತಿಳಿಸಿದರು.

“ಸಂಪನ್ಮೂಲಗಳ ಕೊರತೆಯಿರುವ ಪ್ರದೇಶಗಳಲ್ಲಿಯೂ ಟ್ರಾನ್ಸ್‌ಪ್ಲಾಂಟೇಶನ್ ವೆಚ್ಚವನ್ನು ಕಡಿಮೆ ಮಾಡಿ, ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟ ಮತ್ತು ಉತ್ತಮ ಫಲಿತಾಂಶಗಳನ್ನು ಸಾಧಿಸಬಹುದು ಎಂಬುದನ್ನು ಈ ಸಾಧನೆ ತೋರಿಸಿದೆ. DKMS ಮತ್ತು ಕ್ಯೂರ್2ಚಿಲ್ಡ್ರನ್ ಜೊತೆಗಿನ ಸಹಭಾಗಿತ್ವ ಈ ಯಶಸ್ಸಿನಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದೆ,” ಎಂದರು.

3,000ಕ್ಕೂ ಹೆಚ್ಚು ಮಕ್ಕಳಿಗೆ ನಿರಂತರ ಆರೈಕೆ

ಪ್ರಸ್ತುತ ಸಂಕಲ್ಪ ಇಂಡಿಯಾ ಫೌಂಡೇಶನ್ ದೇಶದಾದ್ಯಂತ 30 ಸಮಗ್ರ ತಲಸೇಮಿಯಾ ಡೇ-ಕೇರ್ ಕೇಂದ್ರಗಳ ಮೂಲಕ 3,000ಕ್ಕೂ ಹೆಚ್ಚು ಮಕ್ಕಳಿಗೆ ಆರೈಕೆ ಒದಗಿಸುತ್ತಿದೆ.

ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಎರಡು ವಿಶೇಷ ಮಕ್ಕಳ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಕೇಂದ್ರಗಳನ್ನು ಸಂಸ್ಥೆ ನಡೆಸುತ್ತಿದೆ. ರೋಗ ತಡೆಗಟ್ಟುವಿಕೆ ಜಾಲವು 81 ಜಿಲ್ಲೆಗಳಲ್ಲಿನ 87 ಕೇಂದ್ರಗಳಿಗೆ ವಿಸ್ತರಿಸಿದ್ದು, ಈಗಾಗಲೇ 2.20 ಲಕ್ಷಕ್ಕೂ ಹೆಚ್ಚು ದಂಪತಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ.

ಆರೈಕೆಯ ಗುಣಮಟ್ಟಕ್ಕೆ ಅಂತಾರಾಷ್ಟ್ರೀಯ ಮನ್ನಣೆ

ಸಹಭಾಗಿತ್ವವು ಚಿಕಿತ್ಸೆಯ ವ್ಯಾಪ್ತಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಆರೈಕೆಯ ಗುಣಮಟ್ಟವನ್ನು ವ್ಯವಸ್ಥಿತವಾಗಿ ಬಲಪಡಿಸುವಲ್ಲಿಯೂ ಯಶಸ್ವಿಯಾಗಿದೆ.

ಬೆಂಗಳೂರಿನ BMJH–ಸಂಕಲ್ಪ ಸೆಂಟರ್ ಫಾರ್ ಪೀಡಿಯಾಟ್ರಿಕ್ ಹೆಮಟಾಲಜಿ, ಆಂಕಾಲಜಿ ಮತ್ತು BMT ಕೇಂದ್ರವು JACIE ಮಾನ್ಯತೆ ಪಡೆದ ಭಾರತದ ಮೊದಲ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹೆಮಟೊಪೊಯಟಿಕ್ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟೇಶನ್ ಮತ್ತು ಸೆಲ್ಯುಲಾರ್ ಥೆರಪಿ ಕ್ಷೇತ್ರದಲ್ಲಿ JACIE ಮಾನ್ಯತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ್ದಾಗಿದೆ. ವೈದ್ಯಕೀಯ ಆರೈಕೆ, ಕಾಂಡಕೋಶ ಸಂಗ್ರಹಣೆ ಮತ್ತು ಸಂಸ್ಕರಣೆ, ಗುಣಮಟ್ಟ ನಿರ್ವಹಣೆ ಹಾಗೂ ರೋಗಿಯ ಸುರಕ್ಷತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಟ್ಟುನಿಟ್ಟಿನ ಮಾನದಂಡಗಳನ್ನು ಪಾಲಿಸಲಾಗುತ್ತಿದೆ ಎಂಬುದಕ್ಕೆ ಈ ಮಾನ್ಯತೆ ಸಾಕ್ಷಿಯಾಗಿದೆ.

ಭಾರತದಲ್ಲಿಯೇ ಸುಸ್ಥಿರವಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಟ್ರಾನ್ಸ್‌ಪ್ಲಾಂಟೇಶನ್ ಸೇವೆ ನೀಡಬಹುದು ಮತ್ತು ಅತ್ಯುತ್ತಮ ಫಲಿತಾಂಶಗಳಿಗಾಗಿ ಪ್ರತಿಯೊಮ್ಮೆ ದುಬಾರಿ ಅಥವಾ ಸಂಕೀರ್ಣ ಮಾದರಿಗಳ ಅಗತ್ಯವಿಲ್ಲ ಎಂಬುದನ್ನು ಈ ಸಾಧನೆ ಪ್ರತಿಪಾದಿಸುತ್ತದೆ.

ಶಾಹೀಮ್ ಜೀವನದಲ್ಲಿ ಮೂಡಿದ ಹೊಸ ಬೆಳಕು

1,000 ಟ್ರಾನ್ಸ್‌ಪ್ಲಾಂಟ್‌ಗಳ ಈ ಮಹತ್ವದ ಸಂಖ್ಯೆಯ ಹಿಂದೆ ಸಾವಿರಾರು ವೈಯಕ್ತಿಕ ಬದುಕಿನ ಕಥೆಗಳಿವೆ.

ಕರ್ನಾಟಕದ ಮುಹಮ್ಮದ್ ಶಾಹೀಮ್‌ಗೆ ಕೇವಲ ಐದು ತಿಂಗಳ ಮಗುವಿದ್ದಾಗಲೇ ತೀವ್ರ ತಲಸೇಮಿಯಾ ಇರುವುದು ಪತ್ತೆಯಾಗಿತ್ತು. ಹಲವು ವರ್ಷಗಳ ಕಾಲ ನಿರಂತರ ರಕ್ತಪೂರಣ ಪಡೆಯಬೇಕಾದ ಪರಿಸ್ಥಿತಿಯಿಂದಾಗಿ ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ, ಹೃದಯ ಮತ್ತು ಯಕೃತ್ತಿನ ಮೇಲೆ ಪರಿಣಾಮ ಬೀರಿತ್ತು. ಇದರಿಂದ ಟ್ರಾನ್ಸ್‌ಪ್ಲಾಂಟೇಶನ್ ಕೂಡ ಹೆಚ್ಚಿನ ಅಪಾಯದ ಚಿಕಿತ್ಸೆಯಾಗಿ ಪರಿಣಮಿಸಿತ್ತು.

ಆದರೆ ಶಾಹೀಮ್‌ನ ತಂಗಿ ಝಾರಾ ಸಂಪೂರ್ಣ ಹೆಚ್‌ಎಲ್‌ಎ ಹೊಂದಾಣಿಕೆಯ ದಾನಿಯಾಗಿರುವುದು ಚಿಕಿತ್ಸೆಗೆ ಹೊಸ ಅವಕಾಶವನ್ನು ನೀಡಿತು. ಬೆಂಗಳೂರಿನ ಸಂಕಲ್ಪ–BMJH ಕೇಂದ್ರದಲ್ಲಿ ತೀವ್ರ ಸಿದ್ಧತೆ ಮತ್ತು ಕೌನ್ಸೆಲಿಂಗ್ ನಂತರ ಕುಟುಂಬವು ಟ್ರಾನ್ಸ್‌ಪ್ಲಾಂಟೇಶನ್‌ಗೆ ಒಪ್ಪಿಗೆ ನೀಡಿತು.

ಶಾಹೀಮ್ ತಾಯಿ ಝರೀನಾ ಅವರಿಗೂ ತಲಸೇಮಿಯಾ ಮೇಜರ್ ಇರುವುದರಿಂದ ಈ ಕಾಯಿಲೆಯ ನೋವು ಮತ್ತು ಸವಾಲುಗಳ ಬಗ್ಗೆ ಅವರಿಗೆ ವೈಯಕ್ತಿಕ ಅನುಭವವಿದೆ. ಅವರು ಈಗಲೂ ನಿಯಮಿತ ಚಿಕಿತ್ಸೆ ಮತ್ತು ರಕ್ತಪೂರಣ ಪಡೆಯುತ್ತಿದ್ದಾರೆ.

“ಒಬ್ಬ ತಾಯಿಯಾಗಿ ನನ್ನ ಮಗನಿಗೆ ತಲಸೇಮಿಯಾ ಇಲ್ಲದ ಜೀವನ ದೊರೆಯಬೇಕು ಎಂಬುದು ನನ್ನ ಕನಸಾಗಿತ್ತು. ನಮಗೆ ಭಯವಿತ್ತು. ಆದರೆ ವೈದ್ಯಕೀಯ ತಂಡ ನಮ್ಮಲ್ಲಿ ಆತ್ಮವಿಶ್ವಾಸ ತುಂಬಿತು. ಇಂದು ಶಾಹೀಮ್‌ನನ್ನು ನೋಡಿದಾಗ, ನಾವು ತೆಗೆದುಕೊಂಡ ನಿರ್ಧಾರ ಸರಿಯಾಗಿತ್ತು ಎಂಬ ತೃಪ್ತಿ ಸಿಗುತ್ತದೆ,” ಎಂದು ಝರೀನಾ ಹೇಳಿದರು.

ಗುಣಮಟ್ಟ ಮತ್ತು ಸಾಮರ್ಥ್ಯ ವೃದ್ಧಿಗೆ ಆದ್ಯತೆ

ಕ್ಯೂರ್2ಚಿಲ್ಡ್ರನ್ ಸಂಸ್ಥಾಪಕ ಮತ್ತು ವೈದ್ಯಕೀಯ ನಿರ್ದೇಶಕ ಡಾ. ಲಾರೆನ್ಸ್ ಫಾಕ್ನರ್ ಮಾತನಾಡಿ, “ತೀವ್ರ ತಲಸೇಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ಮೂಳೆ ಮಜ್ಜೆ ಕಸಿ ಚಿಕಿತ್ಸೆ ನೀಡಲು ವೈದ್ಯಕೀಯ ತಂತ್ರಜ್ಞಾನ ಮಾತ್ರ ಸಾಕಾಗುವುದಿಲ್ಲ. ಅದಕ್ಕಾಗಿ ಸುಶಿಕ್ಷಿತ ತಂಡಗಳು, ಬಲಿಷ್ಠ ಗುಣಮಟ್ಟದ ವ್ಯವಸ್ಥೆಗಳು ಹಾಗೂ ಸಂಕೀರ್ಣ ಚಿಕಿತ್ಸೆಯನ್ನು ವಿಶ್ವಾಸಾರ್ಹವಾಗಿ ಮತ್ತು ಸುಸ್ಥಿರವಾಗಿ ನೀಡುವ ಸಾಮರ್ಥ್ಯ ಅಗತ್ಯ,” ಎಂದು ಹೇಳಿದರು.

“ಸಂಕಲ್ಪ ಸಂಸ್ಥೆಯೊಂದಿಗಿನ ನಮ್ಮ ಸಹಯೋಗವು ಯಾವಾಗಲೂ ಸ್ಥಳೀಯ ನೈಪುಣ್ಯತೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಟ್ರಾನ್ಸ್‌ಪ್ಲಾಂಟೇಶನ್ ಸೌಲಭ್ಯ ಒದಗಿಸುವುದರ ಮೇಲೆ ಕೇಂದ್ರೀಕೃತವಾಗಿದೆ. DKMSನ ದೀರ್ಘಕಾಲೀನ ಬೆಂಬಲದಿಂದ ಈ ಕಾರ್ಯಕ್ರಮ ಪ್ರಮಾಣ ಮತ್ತು ಗುಣಮಟ್ಟ ಎರಡರಲ್ಲಿಯೂ ಗಮನಾರ್ಹವಾಗಿ ಬೆಳೆಯುತ್ತಿದೆ,” ಎಂದರು.

“1,000 ಮಕ್ಕಳ ಟ್ರಾನ್ಸ್‌ಪ್ಲಾಂಟ್ ಒಂದು ಅಸಾಧಾರಣ ಸಾಧನೆಯಾಗಿದ್ದು, JACIE ಮಾನ್ಯತೆ ಕಾರ್ಯಕ್ರಮದ ಪರಿಪಕ್ವತೆ ಮತ್ತು ಉನ್ನತ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ,” ಎಂದು ಅವರು ಹೇಳಿದರು.

ದಾನಿಗಳ ಹುಡುಕಾಟದಿಂದ ಚಿಕಿತ್ಸೆಯವರೆಗೆ ಸಂಪೂರ್ಣ ಬೆಂಬಲ

DKMS ಫೌಂಡೇಶನ್ ಇಂಡಿಯಾದ ಎಕ್ಸಿಕ್ಯೂಟಿವ್ ಚೇರ್ಮನ್ ಪ್ಯಾಟ್ರಿಕ್ ಪೌಲ್ ಮಾತನಾಡಿ, “ತಲಸೇಮಿಯಾ ಇರುವ ಮಗುವಿಗೆ ಸೂಕ್ತ ದಾನಿಯನ್ನು ಗುರುತಿಸುವುದು ಗುಣಮುಖರಾಗುವ ಪಯಣದ ಪ್ರಮುಖ ಹಂತವಾಗಿದೆ. ಆದರೆ ಅದೊಂದೇ ಸಾಕಾಗುವುದಿಲ್ಲ. ಕುಟುಂಬಗಳಿಗೆ ಟ್ರಾನ್ಸ್‌ಪ್ಲಾಂಟೇಶನ್‌ಗೆ ಸ್ಪಷ್ಟವಾದ ಮಾರ್ಗದರ್ಶನ ಹಾಗೂ ಚಿಕಿತ್ಸೆಯ ಹಾದಿಯಲ್ಲಿ ಎದುರಾಗುವ ಹಣಕಾಸು ಮತ್ತು ಪ್ರಾಯೋಗಿಕ ಸವಾಲುಗಳನ್ನು ಎದುರಿಸಲು ಬೆಂಬಲವೂ ಅಗತ್ಯ,” ಎಂದು ಹೇಳಿದರು.

“ನಮ್ಮ ತಲಸೇಮಿಯಾ ಕಾರ್ಯಕ್ರಮದ ಮೂಲಕ ಉಚಿತ ಹೆಚ್‌ಎಲ್‌ಎ ಟೈಪಿಂಗ್ ಮತ್ತು ದಾನಿಗಳ ಹುಡುಕಾಟಕ್ಕೆ ನೆರವು ನೀಡಲಾಗುತ್ತಿದೆ. ರೋಗಿಗಳ ಧನಸಹಾಯ ಕಾರ್ಯಕ್ರಮದ ಮೂಲಕ ಅರ್ಹ ಕುಟುಂಬಗಳಿಗೆ ಟ್ರಾನ್ಸ್‌ಪ್ಲಾಂಟ್ ಮತ್ತು ಟ್ರಾನ್ಸ್‌ಪ್ಲಾಂಟ್ ನಂತರದ ವೆಚ್ಚಗಳಿಗೂ ಸಹಾಯ ಮಾಡಲಾಗುತ್ತಿದೆ,” ಎಂದು ತಿಳಿಸಿದರು.

ಸಂಕಲ್ಪದಂತಹ ಪಾಲುದಾರರೊಂದಿಗೆ ಕಾರ್ಯನಿರ್ವಹಿಸುವುದರಿಂದ ವಿವಿಧ ರೀತಿಯ ಬೆಂಬಲ ವ್ಯವಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಹೆಚ್ಚಿನ ಮಕ್ಕಳನ್ನು ತಲಸೇಮಿಯಾದ ಸವಾಲಿನ ಬದುಕಿನಿಂದ ಗುಣಮುಖರಾಗುವ ಹಾದಿಯತ್ತ ಕರೆದೊಯ್ಯಲು ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದರು.

2047ರ ಗುರಿಯತ್ತ ಮತ್ತೊಂದು ಹೆಜ್ಜೆ

1,000 ಟ್ರಾನ್ಸ್‌ಪ್ಲಾಂಟ್‌ಗಳ ಮೈಲಿಗಲ್ಲು ಇದುವರೆಗೆ ಸಾಧಿಸಿರುವ ಯಶಸ್ಸಿನ ಪ್ರತೀಕವಾಗಿರುವುದರ ಜೊತೆಗೆ ಭವಿಷ್ಯದ ಮಹತ್ವಾಕಾಂಕ್ಷೆಯನ್ನೂ ಪ್ರತಿನಿಧಿಸುತ್ತದೆ.

ಉನ್ನತ ಗುಣಮಟ್ಟದ ಚಿಕಿತ್ಸೆಯನ್ನು ಸುಸ್ಥಿರವಾಗಿ ನೀಡಲು ಅಗತ್ಯವಿರುವ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಮತ್ತು ಹೆಚ್ಚಿನ ಮಕ್ಕಳು ಗುಣಮುಖರಾಗುವ ಅವಕಾಶವನ್ನು ಕಲ್ಪಿಸುವುದು ಈ ಸಹಭಾಗಿತ್ವದ ಮುಂದಿನ ಗುರಿಯಾಗಿದೆ.

ಸಂಕಲ್ಪ ಇಂಡಿಯಾ ಫೌಂಡೇಶನ್‌ಗೆ ಈ ಸಾಧನೆಯು 2047ರ ವೇಳೆಗೆ ‘ತಲಸೇಮಿಯಾ ಮತ್ತು ಹಿಮೋಗ್ಲೋಬಿನೋಪಾಥಿ ಮುಕ್ತ ಭಾರತ’ ನಿರ್ಮಿಸುವ ದೂರದೃಷ್ಟಿಯತ್ತ ಇಟ್ಟಿರುವ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

ಒಂದು ಸಾವಿರ ಮಕ್ಕಳು, ಒಂದು ಸಾವಿರ ಕುಟುಂಬಗಳು ಮತ್ತು ಒಂದು ಸಾವಿರ ಹೊಸ ಬದುಕಿನ ಆರಂಭ—ಈ ಮೈಲಿಗಲ್ಲು ಕೇವಲ ವೈದ್ಯಕೀಯ ಸಾಧನೆಯಲ್ಲ; ತಲಸೇಮಿಯಾದಿಂದ ಮುಕ್ತ ಭವಿಷ್ಯದತ್ತ ಭಾರತದ ಆರೋಗ್ಯ ಕ್ಷೇತ್ರ ಸಾಗುತ್ತಿರುವ ಭರವಸೆಯ ಸಂಕೇತವಾಗಿದೆ.

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ /ಎಸ್‌ಟಿ ನೌಕರರ ಸಮನ್ವಯ ಸಮಿತಿ (ರಿ) ಹಾಗೂ ಕರ್ನಾಟಕ ರಾಜ್ಯ 'ಗ್ರಾಮೀಣಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯ ಎಸ್‌ಸಿ / ಎಸ್‌ಟಿ ಅಧಿಕಾರಿಗಳು ಮತ್ತು ನೌಕರರುಗಳ ಸಂಘದ ಜಂಟಿ ಪತ್ರಿಕಾ ಹೇಳಿಕೆ