ಪರಿಶಿಷ್ಟ ಭೂ ಮಂಜೂರಿದಾರರಿಗೆ ಹಕ್ಕು ದಾಖಲೆಗಳನ್ನು ಒದಗಿಸಲು ಒತ್ತಾಯ.
ಪರಿಶಿಷ್ಟ ಭೂ ಮಂಜೂರಿದಾರರಿಗೆ ಹಕ್ಕು ದಾಖಲೆಗಳನ್ನು ಒದಗಿಸಲು ಒತ್ತಾಯ.
ಬೆಂಗಳೂರು ಫೆಬ್ರವರಿ 2:ರಾಜ್ಯ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಇತರೆ ಜನಾಂಗದವರಿಗಾಗಿ ಸರ್ಕಾರಿ ಗೋಮಾಳ ಹಾಗೂ ಇನ್ನಿತರೆ ಪ್ರವರ್ಗಗಳ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿದ್ದ ರೈತರಿಗೆ 1960ರ ಪೂರ್ವದಲ್ಲಿ ಹಾಗೂ ನಂತರದಲ್ಲಿ ಜಮೀನುಗಳನ್ನು ಮಂಜೂರು ಮಾಡಿದ್ದು ಮಂಜೂರುದಾರರು ತಮ್ಮ ಹಕ್ಕು ದಾಖಲೆಗಳನ್ನು ಪಡೆಯಲು ಹಲವಾರು ದಶಕಗಳಿಂದಲೂ,ದಾಖಲೆಗಳನ್ನು ಪಡೆಯದೆ ವಿಫಲರಾಗಿರುವುದರಿಂದ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಭೂ ಮಂಜೂರಿದಾರರಿಗೆ ಹಕ್ಕು ದಾಖಲೆಗಳನ್ನು ಒದಗಿಸಬೇಕೆಂದು
ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ವರ್ಗಗಳ ರೈತರ ಹಿತಾರಕ್ಷಣಾ ವೇದಿಕೆ ಮತ್ತು ಕರ್ನಾಟಕ ರಾಜ್ಯ ಡಾ.ಬಿ. ಆರ್. ಅಂಬೇಡ್ಕರ್ ಭೀಮರಥ ಸೇನೆ, ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ,ಭಾರತೀಯ ಬೌದ್ಧ ಮಹಾಸಭಾ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಹನುಮಂತಯ್ಯ,ನಾಗರತ್ನಮ್ಮ,ಮಂಜುಳಾ, ದರಖಾಸ್ತು ಪೋಡಿಯಾಗಿ ದಶಕಗಳಿಗೂ ಹೆಚ್ಚಿನ ಅವಧಿಯಿಂದ ಪಹಣಿ ದಾಖಲೆ ಪಡೆಯಲು ಅರ್ಜಿ ಸಲ್ಲಿಸಿದ್ದರೂ ಸಹ ಭೂಮಿ ತಂತ್ರಾಂಶದಲ್ಲಿ ಈ ಹಿಂದೆ ಪೋಡಿಯಾಗಿರುವ ಪ್ರಕರಣಗಳಿಗೆ ಪಹಣಿ ದಾಖಲಿಸಲು ತಹಸೀಲ್ದಾರ್ ಹಾಗೂ ಎ.ಡಿ.ಎಲ್.ಆರ್. ಕಛೇರಿಗಳಲ್ಲಿ ಹಲವಾರು ವರ್ಷಗಳಿಂದ ಕಡತಗಳು ಇತ್ಯರ್ಥಕ್ಕೆ ಬಾಕಿ ಉಳಿದುಕೊಂಡಿದ್ದು, ಭೂ ಮಂಜೂರಿದಾರರು ಕಛೇರಿಯಿಂದ ಕಛೇರಿಗೆ ಅಲೆಯುವಂತೆಯಾಗಿದೆ. ಈ ಬಗ್ಗೆ ಸರ್ಕಾರವು ಇಂತಹ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಭೂಮಿ ತಂತ್ರಾಂಶದಲ್ಲಿ ಅವಕಾಶ ಮಾಡಿಕೊಡಲು ಕ್ರಮ ಕೈಗೊಳ್ಳ ಬೇಕು ಎಂದು ಹೇಳಿದರು.
ಆಕಾರ್ ಬಂದ್ ದಾಖಲೆಯನ್ನು ಡಿಜಿಟಲೈಜೆಷನ್ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು ಪೂರ್ಣಗೊಂಡ ಗ್ರಾಮಗಳ ಆಕಾರ್ ಬಂದ್ ದಾಖಲೆಯನ್ನು ಗ್ರಾಮಾಡಳಿತಾಧಿಕಾರಿಗಳಿಗೆ ಒದಗಿಸಿ ಆಕಾರ್ ಬಂದ್ ದಾಖಲೆ ಮತ್ತು ಪಹಣಿ ದಾಖಲೆಗೆ ತಾಳೆ ಮಾಡಿ ಕೈತಪ್ಪಿರುವ ಪಹಣಿ ದಾಖಲೆಗಳನ್ನು ದಾಖಲಿಸಲು ತಂತ್ರಾಂಶದಲ್ಲಿ ಅವಕಾಶ ಮಾಡಿಕೊಡಲು ಕ್ರಮ ವಹಿಸಬೇಕು,ಆಕಾರ್ ಬಂದ್ ದಾಖಲೆಯಲ್ಲಿ' ಆ' ಮತ್ತು 'ಬ' ಖರಾಬನ್ನು ವರ್ಗೀಕರಿಸದೇ 'ಸಿ' ಕಾಲಂ ನಲ್ಲಿ ದಾಖಲೆಯಾಗಿದ್ದು ಭೂಮಾಲೀಕರು ತಮ್ಮ ಜಮೀನುಗಳನ್ನು ವಿವಿಧ ರೀತಿಯಲ್ಲಿ ವರ್ಗಾವಣೆ ಮಾಡಿಕೊಳ್ಳಲು 11ಇ ಅರ್ಜಿ ದಾಖಲಿಸಲು ಪಹಣಿ ಕಾಲಂ 3 ಮತ್ತು 9ರಲ್ಲಿ ವಿಸ್ತಿರ್ಣ ತಾಳೆ
ಇಲ್ಲದಿರುವುದರಿಂದ ಭೂಮಾಲೀಕರಿಗೆ ಅನಾನುಕೂಲವಾಗಿರುತ್ತದೆ.ಆದ್ದರಿಂದ ಆಕಾರ್ ಬಂದ್ ದಾಖಲೆಯಲ್ಲಿ ಖರಾಬ್ ವಿಸ್ತೀರ್ಣವನ್ನು ಅ ಮತ್ತು ಬ ಖರಾಬ್ ನ್ನು ವರ್ಗೀಕರಿಸಿ ಭೂಮಾಲೀಕರಿಗೆ 11ಇ ನಕ್ಷೆ ಪಡೆಯಲು ಕ್ರಮವಹಿಸಬೇಕು ಎಂದು ಹೇಳಿದರು.
ಸರ್ಕಾರವು ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ದರಖಾಸ್ತು ಪೋಡಿಗಳನ್ನು ಮಾಡಲು ಕ್ರಮ ಕೈಗೊಂಡಿದ್ದು ತಹಸೀಲ್ದಾರ್ ಹಂತದಲ್ಲಿ ಪೋಡಿ ಪ್ರಸ್ತಾವನೆ ಕಡತ ತಯಾರಿಸುವ ಮೂಲ ಮಂಜೂರಿ ಕಡತಗಳು ಲಭ್ಯವಿದ್ದರೂ ಸರ್ಕಾರದ ಮಾರ್ಗಸೂಚಿಗಳನ್ನು ಅರ್ಥೈಸಿಕೊಳ್ಳದೇ ಉದ್ದೇಶಪೂರ್ವಕವಾಗಿ ಮಿಸ್ಸಿಂಗ್ ಕಡತ ತಯಾರಿಸುತ್ತಿರುವುದು ಸರ್ಕಾರ-ಗಮನಕ್ಕೂ ಸಹ ಬಂದಿದೆ ಮೂಲ ಮಂಜೂರಿ ಕಡತಗಳು ಅನುಮಾನಾಸ್ಪದವಾಗಿದೆ ಎಂದು ಪೋಡಿ ಪ್ರಸ್ತಾವನೆಯನ್ನು ತಿರಸ್ಕರಿಸುತ್ತಿರುವ ಬಗ್ಗೆ ಸರ್ಕಾರವು ಈ ಬಗ್ಗೆ ಸುತ್ತೋಲೆ ಹೊರಡಿಸ ಬೇಕು ಎಂದು ಹೇಳಿದರು.

Comments
Post a Comment