ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನೆಯಾಗಬೇಕು: ಕೆ ಬಸಪ್ಪ ಗೌಡ

 

ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಸ್ಥಾಪನೆಯಾಗಬೇಕು: ಕೆ ಬಸಪ್ಪ ಗೌಡ  


ಬೆಂಗಳೂರು: ಮಧ್ಯ ಕರ್ನಾಟಕದ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡ ಕರ್ನಾಟಕ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಶಿವಮೊಗ್ಗದಲ್ಲಿ ಸ್ಥಾಪನೆಯಾಗಬೇಕು ಎಂದು ಹೋರಾಟ ಸಮಿತಿಯ ಗೌರವಾಧ್ಯಕ್ಷ, ವಕೀಲರಾದ ಕೆ ಬಸಪ್ಪ ಗೌಡ ಆಗ್ರಹಿಸಿದರು.

ಗುರುವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಕರ್ನಾಟಕದ ಜಿಲ್ಲೆಗಳು ಭೌಗೋಳಿಕವಾಗಿ ಹೊಂದಿಕೊಂಡಿರುವ ಜಿಲ್ಲೆಗಳಾಗಿವೆ. ಇವೆಲ್ಲಕ್ಕೆ ಶಿವಮೊಗ್ಗ ಜಿಲ್ಲೆ ಕೇಂದ್ರ ಸ್ಥಾನವಾಗಿದೆ. 1956 ರಲ್ಲಿ ರಾಜ್ಯಗಳ ಪುನರ್ ವಿಂಗಡಣೆಯಾದಾಗ, ಕರ್ನಾಟಕ ರಾಜ್ಯದ ಎಲ್ಲಾ ಆಡಳಿತಾತ್ಮಕ ಸಂಘ ಸಂಸ್ಥೆಗಳು, ಮಧ್ಯಸ್ಥಾನವಾದ ಶಿವಮೊಗ್ಗ ಅಥವಾ ಹರಿಹರಕ್ಕೆ ಸ್ಥಾಪಿತಗೊಳ್ಳಬೇಕು ಎಂದು ಮಧ್ಯ ಕರ್ನಾಟಕದ ಜನರ ಹಕ್ಕಾಗಿತ್ತು ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಹೈದರಾಬಾದ್- ಕರ್ನಾಟಕ ಮತ್ತು ಉತ್ತರ ಕರ್ನಾಟಕಕ್ಕೆ ಜಸ್ವಂತ್ ಸಿಂಗ್ ಕಮಿಷನ್ ಸೂತ್ರಗಳನ್ನು ಗಮನಿಸಿ ಭೌಗೋಳಿಕ ದೂರವನ್ನು ಪ್ರಮುಖವಾಗಿ ಪರಿಗಣಿಸಿ, ಆ ಭಾಗ ಮಧ್ಯ ಭಾಗವಾದ ಗುಲ್ಬರ್ಗದಲ್ಲಿ ಸಂಚಾರಿ ಪೀಠ ಸ್ಥಾಪಿಸಲಾಗಿತ್ತು. ಈಗ ಅದು ಶಾಶ್ವತ ಪೀಠವಾಗಿ ಪರಿವರ್ತನೆಗೊಂಡಿದೆ. ಅದೇ ರೀತಿಯಾಗಿ ಉತ್ತರ ಕರ್ನಾಟಕದಲ್ಲಿ ಸಂಚಾರಿ ಪೀಠವನ್ನು 2008 ರಲ್ಲಿ ಧಾರವಾಡದಲ್ಲಿ ಸ್ಥಾಪಿಸಲಾಯಿತು. ಆದರೆ ಗುಲ್ಬರ್ಗದಲ್ಲಿ ಇರುವ ಸಂಚಾರಿ ಪೀಠಕ್ಕೆ ಸಾಕಾಗುವಷ್ಟು ಕೇಸುಗಳ ಸಂಖ್ಯೆ ಇಲ್ಲದಿದ್ದರೂ, ಅಲ್ಲಿನ ಪೀಠವನ್ನು ಉಳಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಅಧ್ಯಕ್ಷ ಅಶೋಕ್ ಜಿ ಭಟ್ ಮಾತನಾಡಿ, ನಮ್ಮ ಬೇಡಿಕೆಗೆ ಪೂರಕ ವಿವರಗಳನ್ನು ನೀಡಲಾಗಿದೆ. ಮುಖ್ಯ ಮಂತ್ರಿಗಳಿಗೆ ಮತ್ತು ಮುಖ್ಯ ನ್ಯಾಯಾಧೀಶರಿಗೆ ನಮ್ಮ ಬೇಡಿಕೆಗಳನ್ನು ಪರಿಶೀಲಿಸುವಂತೆ ಮನವಿ ಮಾಡಲಾಗಿದೆ. ಮಂಗಳೂರಿನಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ಉಚ್ಚ ನ್ಯಾಯಾಲಯದ ಸಂಚಾರಿ ಪೀಠಕ್ಕೆ ಕರಾವಳಿ ಜಿಲ್ಲೆಗಳನ್ನು ಮಾತ್ರ ಸೇರಿಸಲಾಗಿದೆ. ಈ ಕಾರಣದಿಂದ ನಾವು ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿಯಾಗಲು ಶಿವಮೊಗ್ಗದಿಂದ ಬಂದಿದ್ದೇವೆ ಎಂದರು.

ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಮತ್ತು ಜನತೆಯಾದಿಯಾಗಿ ಎಲ್ಲರೂ ಶಿವಮೊಗ್ಗ ಜಿಲ್ಲೆಯನ್ನು ಮಂಗಳೂರು ಪೀಠಕ್ಕೆ ಸೇರಿಸುವ ಪ್ರಸ್ತಾವನೆಗೆ ಸಂಪೂರ್ಣ ವಿರೋಧವಾಗಿದ್ದಾರೆ. ಎಲ್ಲರ ಅಭಿಪ್ರಾಯ ಮಧ್ಯ ಕರ್ನಾಟಕ ಭಾಗವಾದ ಶಿವಮೊಗಕ್ಕೆ ಸಂಚಾರಿ ಪೀಠ ಬೇಕು ಎನ್ನುವುದಾಗಿದೆ. ಜಸ್ವಂತ್ ಸಿಂಗ್ ವರದಿಯ ಅನ್ವಯ ಕೂಡ ಎಲ್ಲಾ ಸೂತ್ರಗಳಲ್ಲೂ ಶಿವಮೊಗ್ಗ ಜಿಲ್ಲೆ ಎಲ್ಲಾ ಅರ್ಹತೆಗಳನ್ನು ಹೊಂದಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ವಕೀಲರುಗಳಾದ ಕೆ ವಾಸುದೇವ ಮೂರ್ತಿ, ಎ ಗೋಪಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Comments