ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾದ ಅನುದಾನದ ದುರುಪಯೋಗ ಖಂಡಿಸಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ – ಆಗಸ್ಟ್ 21ರಂದು ಕ.ದ.ಸಂ.ಸ.ನ ಕರೆ
ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾದ ಅನುದಾನದ ದುರುಪಯೋಗ ಖಂಡಿಸಿ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ – ಆಗಸ್ಟ್ 21ರಂದು ಕ.ದ.ಸಂ.ಸ.ನ ಕರೆ

ಬೆಂಗಳೂರು, ಆಗಸ್ಟ್ 7:
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ರೂಪಿಸಲಾದ ಎಸ್.ಸಿ.ಎಸ್.ಪಿ – ಟಿ.ಎಸ್.ಪಿ (SCSP-TSP) ಕಾಯ್ದೆ 2013 ರ ಕಲಂ 7ಸಿ ಅನ್ನು ಕೂಡಲೇ ರದ್ದುಪಡಿಸಬೇಕು ಎಂಬುದರ ಜೊತೆಗೆ, ಪರಿಶಿಷ್ಟರ ಹಕ್ಕಿನ ಅನುದಾನವನ್ನು ಇತರ ಯೋಜನೆಗಳಿಗೆ ಬಳಸುವ ಪದ್ಧತಿಗೆ ತಡೆಯ ಹಾಕಬೇಕು ಎಂಬ ಮನವಿಯೊಂದಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ.ದ.ಸಂ.ಸ.) ದಿನಾಂಕ ಆ.21, 2025ರ ಗುರುವಾರ, ಮಧ್ಯಾಹ್ನ 12 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ ಹಮ್ಮಿಕೊಳ್ಳಲಿದೆ.
ಸಂಘಟನೆಯ ಮುಖಂಡರ ಮಾತುಗಳ ಪ್ರಕಾರ, ಕಾನೂನಿನ ಕಲಂ 7ಡಿ ಈಗಾಗಲೇ ರದ್ದು ಪಡಿಸಲಾಗಿದೆ. ಆದರೆ, 7ಸಿ ಕಲಂ ಮುಂದುವರಿದಿದ್ದು, ಇದರ ಮೂಲಕ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ.ಯ ಅನುದಾನವನ್ನು ಗ್ಯಾರಂಟಿ ಯೋಜನೆಗಳು ಸೇರಿದಂತೆ ಇತರ ಇಲಾಖೆಗಳ ವಿವಿಧ ಉದ್ದೇಶಗಳಿಗೆ ಬಳಸಲು ಅವಕಾಶ ನೀಡಲಾಗಿದೆ. ಈ ಕ್ರಮ ಪರಿಶಿಷ್ಟ ಸಮುದಾಯದ ಹಕ್ಕುಗಳ ವಿರುದ್ಧವಾಗಿದ್ದು, ಅಭಿವೃದ್ಧಿಗೆ ತಡೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 11 ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಒದಗಿಸಿದ್ದ ₹4 ಲಕ್ಷ ಕೋಟಿಗೂ ಅಧಿಕ ಅನುದಾನವನ್ನು ನೇರವಾಗಿ ಬಿಪಿಎಲ್ ಕುಟುಂಬಗಳಿಗೆ ಹಂಚಿದ್ದರೆ, ಪ್ರತಿ ಕುಟುಂಬಕ್ಕೂ ಸುಮಾರು ₹20 ಲಕ್ಷ ಲಭಿಸಬಹುದಾಗಿತ್ತು ಎಂಬ ಲೆಕ್ಕಾಚಾರವನ್ನು ಕ.ದ.ಸಂ.ಸ. ನೀಡಿದೆ.
ಇದೇ ವೇಳೆ, ರಾಜ್ಯದ 38 ಇಲಾಖೆಗಳಲ್ಲಿ ಇತ್ತೀಗೂ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡದಿರುವುದನ್ನು ಸಂಘಟನೆಯು ಗಂಭೀರ ತಪ್ಪು ಎಂದು ಬಣ್ಣಿಸಿದೆ. ಸಂಬಂಧಿತ ಇಲಾಖಾ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಕೂಡ ಅಕ್ಷಮ್ಯ ಅಪರಾಧವೆಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಪರಿಶಿಷ್ಟ ದೌರ್ಜನ್ಯ ತಡೆ ಕಾಯ್ದೆ ಮತ್ತು SCSP-TSP ಕಾಯ್ದೆಯ ಕಲಂ 24ರಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಜೈಲಿಗೆ ಕಳಿಸಲು ಸಂಘಟನೆ ಒತ್ತಾಯಿಸಿದೆ.
ಸಂಘಟನೆಯ ಪ್ರಮುಖ ನಾಯಕರಾದ ಹೆಣ್ಣೂರು ಶ್ರೀನಿವಾಸ್ (ರಾಜ್ಯ ಸಂಚಾಲಕರು), ಬೇಗೂರು ಮುನಿರಾಜು (ಬೆಂಗಳೂರು ವಿಭಾಗೀಯ ಸಂಚಾಲಕರು), ಹೆಗನಹಳ್ಳಿ ಮೂರ್ತಿ (ರಾಜ್ಯ ಸಮಿತಿ ಸದಸ್ಯರು), ಸೂರಹುಣಸೆ ಸುಬ್ರಮಣಿ (ಜಿಲ್ಲಾ ಸಂಚಾಲಕರು) ಹಾಗೂ ಇತರ ಮುಖಂಡರು ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅವರು ಮುಂದಿನಂತೆಯೇ ಬೇಡಿಕೆಗಳನ್ನು ಈ ರೀತಿ ಪ್ರಸ್ತಾಪಿಸಿದರು:
1. SCSP-TSP ಕಾಯ್ದೆಯ 7ಸಿ ಕಲಂ ತಕ್ಷಣವೇ ರದ್ದುಪಡಿಸಬೇಕು.
2. ಪರಿಶಿಷ್ಟ ಸಮುದಾಯದ ಹಕ್ಕು ಅನುದಾನವನ್ನು ಇತರ ಯೋಜನೆಗಳಿಗೆ ಬಳಸುವ ಪ್ರಕ್ರಿಯೆಗೆ ತಡೆಹಾಕಬೇಕು.
3. 38 ಇಲಾಖೆಗಳ ಬ್ಯಾಕ್‌ಲಾಗ್ ಹುದ್ದೆಗಳ ಕುರಿತಾದ ನಿಖರ ಅಂಕಿಅಂಶಗಳನ್ನು ಪ್ರಕಟಿಸಬೇಕು.
4. ಮಾಹಿತಿ ನಿರ್ಲಕ್ಷಿಸಿದ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು.
5. ಸೂಪ್ರೀಂ ಕೋರ್ಟ್ ಸೂಚನೆಯಂತೆ Empirical Data ಸಂಗ್ರಹಿಸಿ, ಪರಿಶಿಷ್ಟ ಜಾತಿಗಳ ಜನಸಂಖ್ಯೆ ಅನುಪಾತದಲ್ಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.
ರಾಜ್ಯದ ಎಲ್ಲಾ ಹಂತದ ಸಂಘಟನಾ ಪದಾಧಿಕಾರಿಗಳು, ಪ್ರಗತಿಪರರು, ಕಾರ್ಮಿಕರು ಈ ಧರಣಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕ.ದ.ಸಂ.ಸ. ಈ ಮೂಲಕ ಸಾರ್ವಜನಿಕರಿಗೆ ಕರೆ ನೀಡಿದೆ.
Public report news6361355960
Comments
Post a Comment