ಪತ್ರಿಕಾ ಗೋಷ್ಟಿಯಲ್ಲಿ ಎ.ಜಾಕೀರ್ ಹುಸೇನ್ ಅವರ ಬಿಡುಗಡೆಮಾಡಿರುವ ಹೇಳಿಕೆ

 ಪತ್ರಿಕಾ ಗೋಷ್ಟಿಯಲ್ಲಿ ಎ.ಜಾಕೀರ್ ಹುಸೇನ್ ಅವರ ಬಿಡುಗಡೆಮಾಡಿರುವ ಹೇಳಿಕೆ

ಕರ್ನಾಟಕ ರಾಜ್ಯ ವಕ್ಸ್ ಬೊರ್ಡ್‌ನ ಚಿತ್ರದುರ್ಗ ಜಿಲ್ಲಾ ಸಮಿತಿಗೆ ಅತೀ ಶೀಘ್ರದಲ್ಲೇ ಅಧ್ಯಕ್ಷರ ನೇಮಕಾರಿ ಪ್ರಕ್ರಿಯೆ ಆರಂಭವಾಗಲಿದ್ದು, ಈ ಹುದ್ದೆಗೆ ಹಲವರು ಪ್ರಯತ್ನ ಪಟ್ಟಿರುವುದು ತಿಳಿದಿರುವ ವಿಚಾರವೇ ಆಗಿದೆ. ನಾನು ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಚಿತ್ರದುರ್ಗದಲ್ಲಿ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಬಂದಿರುತ್ತೇನೆ. ಅದರಲ್ಲೂ ವಿಶೇಷವಾಗಿ ಕೂಲಿಕಾರ್ಮಿಕರು, ವಿವಿಧ ವರ್ಗಗಳ ಕಾರ್ಮಿಕರ ಸಂಘಟನೆಗಳು, ಜನಪರ ಸಂಘಟನೆಗಳು, ಇತ್ಯಾದಿ ಸಂಘ ಸಂಸ್ಥೆಗಳಲ್ಲಿ ಸುಧೀರ್ಘವಾಗಿ ಕಾರ್ಯನಿರ್ವಹಿಸಿಕೊಂಡು ಬಂದಿದ್ದು, ಸಾವಿರಾರು ಬಡವರು, ಕಾರ್ಮಿಕರು, ಇತರೆ ವರ್ಗದ ಜನರ ಶ್ರೇಯಸ್ಸಿಗೆ ಶ್ರಮಿಸಿರುತ್ತೇನೆ.

ಕಾಲ ಚಿತ್ರದುರ್ಗದಲ್ಲಿ ಮೂರು ದಶಕಗಳಿಗೂ ಹೆಚ್ಚು ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಚಿತ್ರದುರ್ಗ ಜಿಲ್ಲಾ ಬಡಗಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಹಾಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ವರ್ಗದ ನೂರಾರು ಬಡ ಕುಟುಂಬಗಳಿಗೆ ವಸತಿ, ನಿವೇಶನ, ಕಲ್ಪಿಸಿಕೊಡುವ ಸಲುವಾಗಿ ಚಿತ್ರದುರ್ಗಕ್ಕೆ ಸಮೀಪದ ರಾಷ್ಟ್ರೀಯ ಹೆದ್ದಾರಿ ದಾವಣಗೆರೆ ರಸ್ತೆಗೆ ಹೊಂದಿಕೊಂಡಂತೆ ಜಮೀನನ್ನು ಖರೀದಿಸಿ. ಅಲ್ಲಿ ಬಡಾವಣೆಯನ್ನು ನಿರ್ಮಿಸಲಾಗುತ್ತಿದೆ. ಈ ಯೋಜನೆ ಕಾರ್ಯರೂಪಕ್ಕೆ ಬರುತ್ತಿದ್ದು, ಇದರಿಂದ ನೂರಾರು ಕುಟುಂಬಗಳಿಗೆ ಸೂರು ಕಲ್ಪಿಸಿದಂತಾಗುತ್ತದೆ.

ಚಿತ್ರದುರ್ಗ ಜಿಲ್ಲೆಯಲ್ಲಿರುವ ಬಹುತೇಕ ಎಲ್ಲಾ ವರ್ಗದ ಜನರ ಜೊತೆಗೆ ಒಡನಾಟವನ್ನಿಟ್ಟುಕೊಂಡು ಬಂದಿರುತ್ತೇನೆ. ಜಾತಿ ಧರ್ಮವನ್ನು ಮೀರಿ, ಅವರೊಂದಿಗೆ ಬೆರೆತು, ಜನಹಿತ ಕೆಲಸಗಳನ್ನು ಮಾಡಿರುವುದರಿಂದ ನನ್ನ ಮೇಲೆ ಅಪಾರ ವಿಶ್ವಾಸ ವ್ಯಕ್ತವಾಗುತ್ತಿದೆ. ಈ ಹಿಂದೆ ಆಜಾದ್ ನಗರ ಅಂಜುಮಾನ್ ಮಸೀದಿ ಆಡಳಿತ ಮಂಡಳಿಗೆ ನಿರ್ದೇಶಕನಾಗಿ ನೇಮಕಗೊಂಡಿರುತ್ತೇನೆ. ಕರ್ನಾಟಕ ಮುಸ್ಲಿಂ ಸಂಘದ ಕಾರ್ಯಾಧ್ಯಕ್ಷರಾಗಿ, ಮುಸ್ಲಿಂ ಆಫ್ ಇಂಡಿಯಾ ಸಂಘಟನೆಯ ರಾಜ್ಯಾಧ್ಯಕ್ಷನಾಗಿ ಮುಸ್ಲಿಂ ಸಮಾಜದ ಹಿತಕ್ಕಾಗಿ ಶ್ರಮಿಸಿರುತ್ತೇನೆ. ಇಂಟೆಕ್ (ಕೆಪಿಸಿಸಿ) ಉಪಾಧ್ಯಕ್ಷರಾಗಿ ಐ.ಎಂ.ಬಿ.ಸಿ.ಎಫ್.ಡಬ್ಲ್ಯೂ. ಉಪಾಧ್ಯಕ್ಷರಾಗಿ ಚಿತ್ರದುರ್ಗ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರ ಜೊತೆಗೆ ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿಯೂ ಕೂಡ ಗುರುತಿಸಿಕೊಂಡಿರುತ್ತೇನೆ.

ನಾನು ಎರಡು ದಶಕಗಳಿಂದ ಮುಸ್ಲಿಂ ಜನಾಂಗದ ಅಭಿವೃದ್ಧಿಗಾಗಿ, ಜನಾಂಗದ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡುವ ಈ ಸಮಾಜದ ಬಡವರು, ನಿರ್ಗತಿಕರಿಗೆ ಆರ್ಥಿಕ ಮತ್ತು ಇತರೆ ನೆರವು ಕಲ್ಪಿಸಿಕೊಡುತ್ತಾ ಬಂದಿರುತ್ತೇನೆ. ಇಡಿ ದೇಶವನ್ನು ಕಾಡಿದ ಕೊರೋನಾ ಎಂಬ ಭಯಾನಕ ವೈರಸ್ ಬಂದ ಸಮಯದಲ್ಲಿ ಜನರು ತತ್ತರಿಸುತ್ತಿದ್ದ ಸಂದರ್ಭದಲ್ಲಿ ಮುಸ್ಲಿಂ ಸಮಾಜದವರ ಮನೆ ಮನೆಗಳಿಗೂ ತೆರಳಿ, ಜನ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿರುತ್ತೇನೆ. ಹಾಗೂ ಇತರೆ ಸಮಾಜದ ಜನರಿಗೂ ರೇಷನ್ ಕಿಟ್, ಇತರೆ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿರುತ್ತೇನೆ. ಮುಸ್ಲಿಂ ಸಮಾಜಕ್ಕೆ ಮೀಸಲಾತಿ ಕೊಡುವ ವಿಚಾರದಲ್ಲಿ ಸರ್ಕಾರದ ಜೊತೆ ಸಂಬಂಧಪಟ್ಟ ಸಮಾಜದ ಮುಖಂಡರ ಜೊತೆ ತೆರಳಿ ಸಚಿವರಿಗೆ ಮನವಿಯನ್ನು ಸಲ್ಲಿಸಲಾಗಿದೆ.

ಜಿಲ್ಲೆಯಲ್ಲಿ ಮುಸ್ಲಿಂ ಸಮಾಜದ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ನಮ್ಮ ಸಮಾಜದ ಎಲ್ಲಾ ಪಂಗಡಗಳ, ಎಲ್ಲಾ ಧಾರ್ಮಿಕ ಮುಖಂಡರು ಕೂಡ ನನ್ನ ಸಾಮಾಜಿಕ ಸೇವಾ ಕ್ಷೇತ, ಜನಪರ ಕೆಲಸ ನೋಂದವರಿಗೆ ನೀಡುತ್ತಿರುವ ಸೌಲಭ್ಯ, ನನ್ನ ಸಮಾಜಮುಖಿ ಕಾರ್ಯವೈಖರಿಗಳಿಗೆ ಮುಸ್ಲಿಂ ಜನಾಂಗದ ಧಾರ್ಮಿಕ ಮುಖಂಡರುಗಳು, ಬೇರೆ ವರ್ಗದ ಚಿಂತಕರು ವಿವಿಧ ಮಠಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ವಕ್ಸ್ ಬೋರ್ಡ್ ಸಮಿತಿ ಒಂದು ಮಹತ್ವದ ಸಂಸ್ಥೆಯಾಗಿದ್ದು, ಇದು ಸಾಮಾಜಿಕ, ಸಾರ್ವಜನಿಕ, ಸೇವಾ ವಲಯದ ಸಂಸ್ಥೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಎಲ್ಲಾ ಮಸೀದಿಗಳ

ದರ್ಗಾ, ಇತರೆ ಸಂಸ್ಥೆಗಳ ಮುತುವಲ್ಲಿ, ಗುರುಗಳು, ಸಮಾಜದ ಮುಖಂಡರು ನನ್ನ ಮೇಲೆ ನಂಬಿಕೆ, ವಿಶ್ವಾಸವಿಟ್ಟು ಈ ಹುದ್ದೆಗೆ ನೇಮಕಮಾಡಲು ನೆರವಾದರೆ ಈ ಜನರ ಋಣ ತೀರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಇದೂವರೆಗೂ ನಮ್ಮ ಮುಸ್ಲಿಂ ಸಮಾಜದ ಯಾವುದೇ ಮಸೀದಿ, ದರ್ಗಾ, ಇತರೆ ಸಮಿತಿಗಳಿಗೆ ಯಾವತ್ತಿಗೂ ಯಾವುದೇ ಸ್ಥಾನಮಾನವನ್ನು ಬಯಸಿಲ್ಲ. ಆದರೆ ಈಗ ಮುಸ್ಲಿಂ ಸಮಾಜದ ಶ್ರೇಯೋಭಿವೃದ್ಧಿಗಾಗಿ ಚಿತ್ರದುರ್ಗ ಜಿಲ್ಲಾ ವಕ್ಸ್ ಬೋರ್ಡ್ ಸಮಿತಿಗೆ ಸಮಾಜದ ಮುಖಂಡರ ಒತ್ತಾಯ, ಸಲಹೆ, ಸಹಕಾರ ಕಾರಣಕ್ಕಾಗಿ ಈ ಹುದ್ದೆಯನ್ನು ಬಯಸಿರುತ್ತೇನೆ. ಅದಕ್ಕಾಗಿ ಕಳೆದ ಕೆಲವು ದಿನಗಳಿಂದ ಇಡೀ ಜಿಲ್ಲೆಯ ಮುಸ್ಲಿಂ ಸಮಾಜದ ಹಿರಿಯ ಮುಖಂಡರು ಮಸೀದಿಗಳ ಮುಖ್ಯಸ್ಥರು ಇತರೆ ಜನಪರ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಹುದ್ದೆಗೆ ಸರ್ಕಾರ, ಸಮಾಜ, ನನಗೆ ಅವಕಾಶಕೊಟ್ಟರೆ ಆ ಸಂಸ್ಥೆಗೆ ಘನತೆಯನ್ನು ತರುವಂತಹ ಕೆಲಸವನ್ನು ಮಾಡುತ್ತೇನೆ. ವಕ್ಸ್ ಬೋರ್ಡ್ ಸಮಿತಿಗೆ ಆದಾಯ ಮೂಲವನ್ನು ಹೆಚ್ಚಿಸುವ ಕೆಲಸದ ಜೊತೆಗೆ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ವಾಣಿಜ್ಯ ಮಳಿಗೆಗಳಲ್ಲಿ ಅಲ್ಲಲ್ಲಿ ಕಂಡುಬರುತ್ತಿರುವ ವ್ಯತ್ಯಾಸಗಳನ್ನು ಸರಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಖಾಲಿ ಇರುವ ಸಂಸ್ಥೆಯ ನಿವೇಶನಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ. ಅತಿಕಡಿಮೆ ದರದಲ್ಲಿ ಬಡವರಿಗೆ ಜೀವನ ನಡೆಸಲು ಅನುಕೂಲವಾಗುವ ರೀತಿಯಲ್ಲಿ ಹಂಚಿಕೆಮಾಡಲಾಗುವುದು.

ಪ್ರತಿ ವಾರ ಜಿಲ್ಲೆಯ ಎಲ್ಲಾ ಮಸೀದಿಗಳಿಗೆ ಕಡ್ಡಾಯವಾಗಿ ಭೇಟಿನೀಡಿ, ಅಲ್ಲಿನ ಮುಖ್ಯಸ್ಥರ ಜೊತೆಗೆ ಚರ್ಚಿಸಿ, ಅಲ್ಲಿ ಬೇಕಾಗಿರುವ ಕುಡಿಯುವ ನೀರು, ಚರಂಡಿ, ವಿದ್ಯುತ್, ಇತರೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತರುವ ಪ್ರಯತ್ನ ಮಾಡುತ್ತೇನೆ.

* ಕೆಲವು ಕಡೆ ವಕ್ಸ್ ಬೋರ್ಡ್ ಸಮಿತಿಯ ಮಳಿಗೆಗಳು ಒಂದೇ ಕುಟುಂಬಕ್ಕೇ ಹೆಚ್ಚಿನ ಮಳಿಗೆಗಳು ವಿತರಣೆಯಾಗಿರವುದು ಕಂಡುಬಂದಿದ್ದು, ಈ ಅವ್ಯವಸ್ಥೆಯನ್ನು ಸರಿಪಡಿಸಿ, ನ್ಯಾಯ ಸಮ್ಮತವಾಗಿ ವಿತರಣೆಮಾಡಲು ಪ್ರಯತ್ನ ಮಾಡುತ್ತೇನೆ.

ಈ ಜಿಲ್ಲೆಯ ಜನರ ಹಿತಾಸಕ್ತಿ, ದಲಿತರು, ಹಿಂದುಳಿದವರು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದ ಜನರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದವನಾಗಿದ್ದು, ನಮ್ಮ ಸಮಾಜದ ಹಿರಿಯರು, ಅಂಜುಮಾನ್ ಮಸೀದಿ, ಮದರಸಾ, ಪ್ರಜ್ಞಾವಂತರು ಸರ್ಕಾರದ ಪ್ರತಿನಿಧಿಗಳು ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ಮಾಡಿಕೊಡಬೇಕೆಂದು ಈ ಮೂಲಕ ವಿನಯ ಪೂರ್ವಕವಾಗಿ ಮನವಿಮಾಡಿಕೊಳ್ಳುತ್ತೇನೆ.

ಸ್ಥಳ: ಚಿತ್ರದುರ್ಗ,

ಎ. ಜಾಕೀರ್ ಹುಸೇನ್

ಅಧ್ಯಕ್ಷರು.

ಜಿಲ್ಲಾ ಬಡಗಿ ನೌಕರರ ಸಂಘ, ಚಿತ್ರದುರ್ಗ.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims