ರೋಟರಿ ಬೆಂಗಳೂರು ಉದ್ಯೋಗ್ ಸಂಸ್ಥೆಯಿಂದ ರಜತ ಮಹೋತ್ಸವದ ಅಂಗವಾಗಿ “ಸಂಗೀತ ಸಂಜೆ” – ಜೂನ್ 22ರಂದು ಕಾರ್ಯಕ್ರಮ
ರೋಟರಿ ಬೆಂಗಳೂರು ಉದ್ಯೋಗ್ ಸಂಸ್ಥೆಯಿಂದ ರಜತ ಮಹೋತ್ಸವದ ಅಂಗವಾಗಿ “ಸಂಗೀತ ಸಂಜೆ” – ಜೂನ್ 22ರಂದು ಕಾರ್ಯಕ್ರಮ

ಬೆಂಗಳೂರು: ಸಮಾಜಮುಖಿ ಸೇವೆಯಲ್ಲಿ ಮುಂಚೂಣಿಯಲ್ಲಿರುವ ರೋಟರಿ ಬೆಂಗಳೂರು ಉದ್ಯೋಗ್ ಸಂಸ್ಥೆ ತನ್ನ 25ನೇ ವಾರ್ಷಿಕೋತ್ಸವವನ್ನು ಜೂನ್ 22ರಂದು ಸಂಜೆ 6 ಗಂಟೆಗೆ ನಗರದಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ವಿಶೇಷವಾಗಿ ಆಚರಿಸಲು ಮುಂದಾಗಿದೆ. ರಜತ ಮಹೋತ್ಸವದ ಅಂಗವಾಗಿ ಪ್ರಸಿದ್ಧ ಗಾಯಕರಾದ ವಿಜಯ ಪ್ರಕಾಶ್ ಹಾಗೂ ಅನುರಾಧಾ ಭಟ್ ಅವರ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಸ್ಥೆಯ ಅಧ್ಯಕ್ಷರಾದ ರೋಟೇರಿಯನ್ ರವಿರಾಜ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, “ರೋಟರಿ ಉದ್ಯೋಗ್ ಸಂಸ್ಥೆ ಕಳೆದ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಶಿಕ್ಷಣ, ಆರೋಗ್ಯ ಹಾಗೂ ವೃತ್ತಿ ತರಬೇತಿ ಕ್ಷೇತ್ರಗಳಲ್ಲಿ ನವೀನ ಸೇವಾ ಯೋಜನೆಗಳನ್ನು ನಿರ್ವಹಿಸುತ್ತಿದೆ. ಅನೇಕ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಪುಸ್ತಕಗಳು, ಮೇಜು-ಕುರ್ಚಿಗಳು, ಶೌಚಾಲಯಗಳು ಮತ್ತು ಸಭಾಂಗಣದ ಸೌಲಭ್ಯಗಳನ್ನು ನೀಡಲಾಗಿದೆ,” ಎಂದು ವಿವರಿಸಿದರು.
ಅವರು ಮುಂದುವರೆದು, “ ರವಿ ಕಿರ್ಲೋಸ್ಕರ್ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಡಯಾಲಿಸಿಸ್ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಸಿದ್ದಗಂಗಾ ಹಾಗೂ ದೀ ಆಸ್ಪತ್ರೆಗಳಲ್ಲಿ ಸಹ ಡಯಾಲಿಸಿಸ್ ಕೇಂದ್ರಗಳು ಸ್ಥಾಪಿತಗೊಂಡಿವೆ. ಈ ವರ್ಷ ರೆಡ್ ಕ್ರಾಸ್ ಮತ್ತು ರವಿ ಕಿರ್ಲೋಸ್ಕರ್ ಆಸ್ಪತ್ರೆಯ ಸಹಯೋಗದಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆಯಾಗಿದ್ದು, ಜೂನ್ ತಿಂಗಳ ಕೊನೆಗೆ ಉದ್ಘಾಟನೆಯಾಗಲಿದೆ” ಎಂದರು.
ಉದ್ಯೋಗ ಕಲ್ಪನೆಯ ಉದ್ದೇಶದಿಂದ, ವಿದ್ಯಾಭ್ಯಾಸ ಮುಂದುವರಿಸಲಾಗದ ಯುವಕರು ಹಾಗೂ ನಿರುದ್ಯೋಗಿಗಳಿಗೆ ವೃತ್ತಿ ತರಬೇತಿ ನೀಡುವ ಯೋಜನೆಯೂ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಎಲ್ಲಾ ಸೇವಾ ಯೋಜನೆಗಳಿಗೆ ಆರ್ಥಿಕ ನೆರವಿನ ಭಾಗವಾಗಿ, ಜೂನ್ 22 ರಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ “ಸಂಗೀತ ಸಂಜೆ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಹೃದಯ ನಾಗರಿಕರು ಹಾಗೂ ಮಾಧ್ಯಮ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಸಹಕಾರ ನೀಡಬೇಕೆಂದು ರೋಟರಿ ಬೆಂಗಳೂರು ಉದ್ಯೋಗ್ ಸಂಸ್ಥೆ ಕೋರಿದೆ.
Comments
Post a Comment