ಸಾಮರ್ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಪರವಾನಗಿ ರದ್ದುಪಡಿಸುವಂತೆ ಆಗ್ರಹ – ಗಂಭೀರ ಆರೋಪಗಳು
ಸಾಮರ್ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಪರವಾನಗಿ ರದ್ದುಪಡಿಸುವಂತೆ ಆಗ್ರಹ – ಗಂಭೀರ ಆರೋಪಗಳು

ಬೆಂಗಳೂರು: ಹೆಗ್ಗಡೆನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮರ್ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ವಿರುದ್ಧ ಗಂಭೀರ ಕಾನೂನು ಉಲ್ಲಂಘನೆಗಳ ಆರೋಪ ಕೇಳಿಬಂದಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಯ ಪರವಾನಗಿಯನ್ನು ತಕ್ಷಣವೇ ರದ್ದುಪಡಿಸುವಂತೆ ಸಾಮಾಜಿಕ ಸಂಘಟನೆಗಳು ಆಗ್ರಹಿಸಿದ್ದಾರೆ. ಈ ಶಾಲೆಯ ಆಡಳಿತವನ್ನು ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ, ಮುಂಬೈ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಚಾಮರಾಜಪೇಟೆ ಘಟಕದ ಅಧ್ಯಕ್ಷ ಶ್ರೀ ಚಾಂಗ್ ಪಾಷ ಅವರು ನೀಡಿದ ಮಾಹಿತಿಯಂತೆ, ಶಾಲೆಯು ಶಿಕ್ಷಣ ಇಲಾಖೆಯಿಂದ ಅನೇಕ ಬಾರಿ ನೋಟಿಸ್ ಪಡೆದಿದ್ದರೂ ಯಾವುದೇ ದಾಖಲೆಗಳು ಅಥವಾ ಸ್ಪಷ್ಟನೆ ನೀಡಿಲ್ಲ. ಈ ಮೂಲಕ ಶಾಲೆಯು ಶಿಕ್ಷಣ ಇಲಾಖೆಯ ನಿರ್ದೇಶನಗಳನ್ನೇ ಲಘು ಮಾಡಿರುವುದಾಗಿ ಆರೋಪಿಸಲಾಗಿದೆ.
ಮಾಹಿತಿ ಹಕ್ಕು ಕಾಯ್ದೆ (RTI) ಮೂಲಕ ಲಭಿಸಿದ ವಿವರಗಳ ಪ್ರಕಾರ, ಈ ಶಾಲೆಯು ಮಹಾರಾಷ್ಟ್ರದ ಶಿಕ್ಷಣ ಇಲಾಖೆಯಲ್ಲಿ ನೋಂದಾಯಿತವಾಗಿಲ್ಲ. ಶಾಲೆಯು “ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ”, “ಜಾಮಿಯಾ ಮೊಹಮ್ಮದೀಯ ಮಂನ್ಸೂರ” ಹಾಗೂ “ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಟ್ರಸ್ಟ್” ಎಂಬ ಮೂರು ವಿಭಿನ್ನ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಿರ್ಧಿಷ್ಟವಾದ ಸಂಶಯಗಳಿಗೆ ಕಾರಣವಾಗಿದೆ.
ಇದೆ ವೇಳೆ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮದರಸಾ ಗುಣಮಟ್ಟದ ಶಿಕ್ಷಣ ಯೋಜನೆಯಡಿಯಲ್ಲಿ 2017–18ನೇ ಸಾಲಿಗೆ ಈ ಸಂಸ್ಥೆಯು ರೂ.10 ಲಕ್ಷಗಳ ಅನುದಾನವನ್ನು ಪಡೆದಿದೆ. ಆದರೆ ಸಂಸ್ಥೆಯು “ಅನುದಾನ ರಹಿತ ಶಾಲೆ” ಎಂದು ಸರ್ಕಾರದಲ್ಲಿ ನೋಂದಾಯಿತವಾಗಿದೆ. ಇದು ಸಾರ್ವಜನಿಕ ಹಣದ ದುರುಪಯೋಗ ಮತ್ತು ವಂಚನೆ ಎಂದು ಆರೋಪಿಸಲಾಗಿದೆ.
ಮಕ್ಕಳಿಗೆ ಹಲ್ಲೆ ಮತ್ತು ದೌರ್ಜನ್ಯ ನಡೆದಿರುವ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಶಾಲೆಯು ಭೂಕಬಳಿಕೆ, ಅಕ್ರಮ ಚಟುವಟಿಕೆಗಳು ಹಾಗೂ ಆಡಳಿತದ ದೌರ್ಜನ್ಯಗಳಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಸಮಾಜ ಸೇವಕರು ಶ್ರೀ ಚಾಂದ್ ಪಾಷ, ಅಬ್ದುಲ್ ಹಮೀದ್ ಪಾಷ ಹಾಗೂ ದಲಿತ ಮುಖಂಡ ಎಂ. ಕೃಷ್ಣಪ್ಪ ಅವರು ಮಕ್ಕಳ ಭದ್ರತೆ ಹಾಗೂ ಸಾರ್ವಜನಿಕ ಹಿತಕ್ಕಾಗಿ ಈ ಶಾಲೆಯ ಪರವಾನಗಿಯನ್ನು ತಕ್ಷಣ ರದ್ದುಪಡಿಸಿ, ಸಂಬಂಧಿತ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
Comments
Post a Comment