ಕರಾವಳಿಯ ಸೊಗಡಿನ “ಲೈಟ್ ಹೌಸ್” ಮೇ 16ಕ್ಕೆ ರಾಜ್ಯಾದ್ಯಂತ ಬಿಡುಗಡೆ
ಕರಾವಳಿಯ ಸೊಗಡಿನ “ಲೈಟ್ ಹೌಸ್” ಮೇ 16ಕ್ಕೆ ರಾಜ್ಯಾದ್ಯಂತ ಬಿಡುಗಡೆ

ಬೆಂಗಳೂರು , ಮೇ 5: ಅಸ್ತ್ರ ಪ್ರೊಡಕ್ಷನ್ಸ್ ಹಾಗೂ ಆಮೆ ಕ್ರಿಯೇಶನ್ಸ್ ಬ್ಯಾನರ್‌ನಡಿ ನಿರ್ಮಾಣಗೊಂಡಿರುವ “ಲೈಟ್ ಹೌಸ್” ಕನ್ನಡ ಚಲನಚಿತ್ರವು ಇದೇ ಮೇ 16ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ಶ್ರೀ ದತ್ತಾತ್ರೆಯ ಪಾಟ್ಕರ್ ಬಂಟಕಲ್ಲು ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಸಂದೀಪ್ ಕಾಮತ್ ಅಜೆಕಾರು ಅವರು ನಿರ್ದೇಶಿಸಿದ್ದಾರೆ. “ಲೈಟ್ ಹೌಸ್” ಕರಾವಳಿ ಭಾಗದ ವಿಶಿಷ್ಟವಾದ ಕಲೆ, ಸಂಸ್ಕೃತಿ ಹಾಗೂ ಆಚಾರ ವಿಚಾರಗಳನ್ನು ಅತ್ಯಂತ ಸೊಗಸಾಗಿ ಮತ್ತು ಮನೋಜ್ಞವಾಗಿ ತೆರೆದಿಟ್ಟಿದೆ.
ಚಿತ್ರದ ಬಹುಪಾಲು ಚಿತ್ರೀಕರಣವು ಉಡುಪಿಯ ರಮಣೀಯ ಪರಿಸರದಲ್ಲಿ ನಡೆದಿದ್ದು, ಕರಾವಳಿಯ ನೈಸರ್ಗಿಕ ಸೌಂದರ್ಯವನ್ನು ಸೆರೆಹಿಡಿಯಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಚಿತ್ರತಂಡ, “ಲೈಟ್ ಹೌಸ್” ಒಂದು ಸಂಪೂರ್ಣ ಸಾಂಸಾರಿಕ ಕಥಾಹಂದರವನ್ನು ಹೊಂದಿದ್ದು, ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಕುಳಿತು ಆನಂದಿಸಬಹುದಾದ ಚಿತ್ರ ಇದಾಗಿದೆ. ಪ್ರಸ್ತುತ ಕನ್ನಡ ಮಾಧ್ಯಮ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳು, ನೇತ್ರದಾನದ ಮಹತ್ವ ಹಾಗೂ ಕರಾವಳಿಯ ವಿಶಿಷ್ಟ ಕಲೆ ಮತ್ತು ಸಂಸ್ಕೃತಿಯನ್ನು ಸಮಾಜಕ್ಕೆ ಪರಿಚಯಿಸುವ ಮುಖ್ಯ ಉದ್ದೇಶ ಈ ಚಿತ್ರದಲ್ಲಿದೆ ಎಂದು ತಿಳಿಸಿದೆ.
ಚಿತ್ರದಲ್ಲಿ ಶೋಭರಾಜ್ ಪಾವೂರು, ಮಾನಸಿ ಸುಧೀರ್, ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜಿ, ಪೃಥ್ವಿ ಅಂಬರ್, ರಾಹುಲ್ ಅಮೀನ್, ಶೈಲಶ್ರೀ ಮುಲ್ಕಿ, ಶೀತಲ್ ನಾಯಕ್, ಅಚಲ್ ಜಿ ಬಂಗೇರ, ಅಪೂರ್ವ ಮಾಳ, ಚಂದ್ರಕಲಾ ರಾವ್, ತಿಮ್ಮಪ್ಪ ಕುಲಾಲ್, ನಮಿತಾ ಕಿರಣ್ ಮುಂತಾದ ಹೆಸರಾಂತ ಕಲಾವಿದರು ಅಭಿನಯಿಸಿದ್ದಾರೆ.
“ಲೈಟ್ ಹೌಸ್” ನಾಲ್ಕು ಸುಂದರ ಗೀತೆಗಳನ್ನು ಒಳಗೊಂಡಿದ್ದು, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಹಾಗೂ ಕ್ಲಿಂಗ್ ಜಾನ್ಸನ್ ಅವರ ಸಾಹಿತ್ಯಕ್ಕೆ ವಿಜಯ್ ಪ್ರಕಾಶ್, ವಾಸುಕೀ ವೈಭವ್, ಪೃಥ್ವಿ ಭಟ್ ಮತ್ತು ದಿಯಾ ಹೆಗ್ಡೆ ಅವರು ತಮ್ಮ ಮಧುರ ಕಂಠವನ್ನು ನೀಡಿದ್ದಾರೆ.
ಚಿತ್ರದ ಛಾಯಾಗ್ರಹಣ ಮತ್ತು ಸಂಕಲನದ ಜವಾಬ್ದಾರಿಯನ್ನು ಪ್ರಜ್ವಲ್ ಸುವರ್ಣ ಅವರು ನಿರ್ವಹಿಸಿದ್ದು, ಕಾರ್ತಿಕ್ ಮುಲ್ಕಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಶೇಷವಾಗಿ “ಉಡುಪಿ ನಮ್ಮ ಊರು” ಎಂಬ ಹಾಡಿಗೆ ಗಿರಿಧರ್ ದಿವಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಸಂದೀಪ್ ಕಾಮತ್ ಅಜೆಕಾರು ಅವರು, “ಲೈಟ್ ಹೌಸ್” ಮೇ 16ರಂದು ರಾಜ್ಯದಾದ್ಯಂತ ಹೆಚ್ಚಿನ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಸಮಾಜಕ್ಕೆ ಮತ್ತು ಮಕ್ಕಳಿಗೆ ಅನೇಕ ಮಹತ್ವದ ಸಂದೇಶಗಳನ್ನು ನೀಡಲಿದ್ದು, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳೊಂದಿಗೆ ಈ ಚಿತ್ರವನ್ನು ವೀಕ್ಷಿಸಬೇಕೆಂದು ಕೋರುತ್ತೇನೆ ಎಂದರು.
Comments
Post a Comment