ಪರಿಸರಕ್ಕಾಗಿ ನಾವು ರಾಜ್ಯಮಟ್ಟದ ಹೊಸ ಪರಿಸರ ಸಂಘಟನೆ ಏಪ್ರಿಲ್ 12ರಂದು ಉದ್ಘಾಟನೆ
ಪರಿಸರಕ್ಕಾಗಿ ನಾವು ರಾಜ್ಯಮಟ್ಟದ ಹೊಸ ಪರಿಸರ ಸಂಘಟನೆ ಏಪ್ರಿಲ್ 12ರಂದು ಉದ್ಘಾಟನೆ

ಬೆಂಗಳೂರು, ಏಪ್ರಿಲ್ 8, 2025:
2023ರ ಡಿಸೆಂಬರ್ 3ರಂದು ದುಬೈನಲ್ಲಿ ನಡೆದ 28ನೇ ಭೂರಕ್ಷಣಾ ಸಮ್ಮೇಳನದಲ್ಲಿ 1447 ವಿಜ್ಞಾನಿಗಳು ಮತ್ತು ಚಿಂತಕರು ವಿಶ್ವದತ್ತ ಎಚ್ಚರಿಕೆಯ ಸಂದೇಶ ಹರಡಿದರು:
“ನಾವು ಕಂಗಾಲಾಗಿದ್ದೇವೆ. ಈಗಲೇ ಎಲ್ಲರ ಸಹಾಯ ಅಗತ್ಯವಿದೆ. ನೀವು ಎಲ್ಲಿದ್ದರೂ ಪರಿಸರಕ್ಕಾಗಿ ಕೆಲಸಮಾಡಿ. ಕಾಯುವ ಕಾಲವಿಲ್ಲ, ತುರ್ತು ಪರಿಸ್ಥಿತಿ ಎದುರಾಗಿದೆ.”
ಈ ತೀವ್ರ ಸಂದೇಶವು ಪರಿಸರ ಪ್ರೇಮಿ ಮತ್ತು ಸಾಮಾಜಿಕ ಚಿಂತಕ ಎ. ಟಿ. ರಾಮಸ್ವಾಮಿ ಅವರನ್ನು ಆಂತರಿಕವಾಗಿ ಪ್ರಭಾವಿಸಿದ ಪರಿಣಾಮ, ಅವರು ತಮ್ಮ ಮುಂದಿನ ಜೀವನವನ್ನು ಸಂಪೂರ್ಣವಾಗಿ ಪರಿಸರ ಸಂರಕ್ಷಣೆಗೆ ಮೀಸಲಿಡಲು ನಿರ್ಧರಿಸಿದ್ದಾರೆ.
ಅವರು ಇಂದು ಬೆಂಗಳೂರು ಪತ್ರಿಕಾ ಗೋಷ್ಠಿ ಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಪರಿಸರಕ್ಕಾಗಿ ನಾವು” ಎಂಬ ಹೆಸರಿನ ರಾಜ್ಯಮಟ್ಟದ ಹೊಸ ಪರಿಸರ ಸಂಘಟನೆಯು ಈ ಏಪ್ರಿಲ್ 12, 2025ರಂದು ಅಧಿಕೃತವಾಗಿ ಸ್ಥಾಪನೆಯಾಗಲಿದೆ ಎಂದು ಘೋಷಿಸಿದರು. ರಾಮಸ್ವಾಮಿ ಅವರು ಈ ಸಂಘಟನೆಯ ಅಧ್ಯಕ್ಷರಾಗಿ ನೇಮಕವಾಗಲಿದ್ದಾರೆ.
ಸಂಘಟನೆಯ ಉದ್ದೇಶವೇನೆಂದರೆ, ರಾಜ್ಯದ ವಿವಿಧೆಡೆ ಇರುವ ಪರಿಸರ ತಜ್ಞರು, ಪರಿಸರಾಸಕ್ತರು, ವಿದ್ಯಾರ್ಥಿಗಳು, ನಾಗರಿಕರು ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ಒಂದು ಸಮೂಹ ಶಕ್ತಿಯಾಗಿ ಪರಿಸರ ಸಂರಕ್ಷಣೆಗೆ ಕ್ರಿಯಾಶೀಲ ರೂಪ ನೀಡುವುದು.
ರಾಮಸ್ವಾಮಿ ಅವರು ಹೇಳಿದರು:
“ನಾವು ಮಕ್ಕಳಿಗೆ ಮನೆ, ಹಣ, ಆಸ್ತಿ ಇತ್ಯಾದಿ ಬಿಟ್ಟುಹೋಗುವುದು ಮುಖ್ಯವೆಂದು ಭಾವಿಸಿದ್ದೆವು. ಆದರೆ ನಿಜವಾದ ಆಸ್ತಿ ಎಂದರೆ ವಿಷಮುಕ್ತ ಭೂಮಿ, ಶುದ್ಧ ಕುಡಿಯುವ ನೀರು ಮತ್ತು ಉಸಿರಾಡಲು ಯೋಗ್ಯ ಗಾಳಿ. ಇವಿಲ್ಲದೆ ಅವರ ಬದುಕು ಸುರಕ್ಷಿತವಾಗಿರುವುದಿಲ್ಲ.”
ಅವರು ಸಮಾಜದ ಪ್ರತಿಯೊಬ್ಬರಿಗೂ ಕರೆಯೊಡ್ಡಿ ಹೇಳಿದರು:
“ಈ ಹೋರಾಟದಲ್ಲಿ ಸರ್ಕಾರಗಳು, ಆಡಳಿತಾಧಿಕಾರಿಗಳು, ಮಠ-ಮಹಾಸ್ಥಾನಗಳು, ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ನಾಗರಿಕರು ಒಟ್ಟಾಗಿ ಪಾಲ್ಗೊಳ್ಳಬೇಕು. ಹಸಿರು, ಸ್ವಚ್ಛ, ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ನಾವು ಎಲ್ಲರೂ ಒಂದಾಗಬೇಕು.”
‘ಪರಿಸರಕ್ಕಾಗಿ ನಾವು’ ಸಂಘಟನೆ ಮುಂದಿನ ದಿನಗಳಲ್ಲಿ ಶೈಕ್ಷಣಿಕ ಜಾಗೃತಿ ಅಭಿಯಾನಗಳು, ಪರಿಸರ ಪರಿಶೀಲನೆಗಳು, ಯುವಕ-ಯುವತಿಯರ ಚಟುವಟಿಕೆಗಳು ಮತ್ತು ಸಮುದಾಯಮಟ್ಟದ ಕಾರ್ಯಕ್ರಮಗಳ ಮೂಲಕ ಪರಿಸರ ಪ್ರಜ್ಞೆ ಹುಟ್ಟುಹಾಕುವ ಗುರಿ ಹೊಂದಿದೆ.
ಅವರು ತಮ್ಮ ಭಾಷಣದ ಅಂತಿಮದಲ್ಲಿ ಹೇಳಿದರು:
“ನಮಗೆ ಪ್ರಾಣವಾಯು, ನೀರು, ಆಹಾರ ಒದಗಿಸುವ ಭೂತಾಯಿಗೆ ನಾವು ಋಣಿಯಾಗಿದ್ದೇವೆ. ಆ ಋಣ ತೀರಿಸಲು, ಕ್ಷೀಣಿಸುತ್ತಿರುವ ಪರಿಸರದೀಪವನ್ನು ಬೆಳಗಿಸಲು, ಎಲ್ಲರೂ ಕೈಜೋಡಿಸೋಣ.”
Comments
Post a Comment