ಅರಿವು ಭಾರತ : ಸಮಾಜ ಸುಧಾರಣೆಯ ದಶಮಾನೋತ್ಸವ ಕಾರ್ಯಕ್ರಮ:

 ಅರಿವು ಭಾರತ : ಸಮಾಜ ಸುಧಾರಣೆಯ ದಶಮಾನೋತ್ಸವ ಕಾರ್ಯಕ್ರಮ:

ಅರಿವು ಭಾರತ ಸಂಸ್ಥೆಯು ದಲಿತಗೃಹಪ್ರವೇಶ ಕಾರ್ಯಕ್ರಮವನ್ನು ಪ್ರಾರಂಭಿಸಿ ಹತ್ತು ವರ್ಷಗಳು ಪೂರೈಸಿರುವ ಸಂಬಂಧವಾಗಿ ದಿನಾಂಕ: 15/02/2025ರ ಶನಿವಾರ ಬೆಳಿಗ್ಗೆ 10.00 ಗಂಟೆಗೆ ಕೋಲಾರದಲ್ಲಿರುವ ಟಿ. ಚನ್ನಯ್ಯ ರಂಗ ಮಂದಿರದಲ್ಲಿ ಸಮಾಜ ಸುಧಾರಣೆಯ ದಶಮಾನೋತ್ಸವ ಮತ್ತು "ಒಳ-ಹೊರಗು" ಪುಸ್ತಕ ಜಿಡುಗಡೆ ಸಮಾರಂಭವನ್ನು ಏರ್ಪಡಿಸಲಾಗಿದೆ. ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಾದ ಎಚ್.ಎನ್. ನಾಗಮೋಹನ ದಾಸ್ ಅವರು ಸಮಾರಂಭವನ್ನು ಉದ್ಘಾಟಿಸುವರು. ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರು "ಒಳ-ಹೊರಗು" ಪುಸ್ತಕ ಬಿಡುಗಡೆ ಮಾಡುವರು. ಸಮಾಜ ಕಲ್ಯಾಣ ಸಚಿವರಾದ ಶ್ರೀ ಹೆಚ್.ಸಿ. ಮಹದೇವಪ್ಪ ಅವರು ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸುವರು. ಕೋಲಾರದ ಶಾಸಕರಾದ ಶ್ರೀ ಕೊತ್ತೂರು ಜಿ. ಮಂಜುನಾಥ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಅರಿವು ಅಭಿಯಾನ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಡಾ. ತ್ರಿಲೋಕಚಂದ್ರ ಅವರು ಮಾತನಾಡುವರು. ಪತ್ರಕರ್ತರಾದ ಕೆ. ನರಸಿಂಹ ಮೂರ್ತಿ ಅವರು ಕೃತಿ ಕುರಿತು ಮಾತನಾಡುವರು. ಅರಿವು ಭಾರತ ಸಂಘಟನೆಯ ಅಧ್ಯಕ್ಷರಾದ ಡಾ. ಶಿವಪ್ಪ ಅರಿವು ಅವರು ಪ್ರಾಸ್ತಾವಿಕವಾಗಿ ಮಾತನಾಡುವರು. ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲೆಯ ಸಂಸದರು, ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸುವರು.

ದಲಿತ ಗೃಹಪ್ರವೇಶ: ಭಾರತ ಬದಲಾಗುತ್ತಿದೆ. ಆದರೆ ಈ 21ನೇ ಶತಮಾನದಲ್ಲೂ ಗ್ರಾಮೀಣ ಭಾರತದ ಅಸ್ಪೃಶ್ಯರು ಅಸ್ಪೃಶ್ಯರಾಗಿಯೇ ಉಳಿದಿದ್ದಾರೆ. ಭಾರತದ ಹಳ್ಳಿಗಳಲ್ಲಿ ಅಮಾನವೀಯ ಅಸ್ಪೃಶ್ಯ ಆಚರಣೆಗಳನ್ನು ಈಗಲೂ ಗಮನಿಸಬಹುದಾಗಿದೆ. ಗ್ರಾಮೀಣ ಭಾಗದಲ್ಲಿ ಸವರ್ಣೀಯರ ಮನೆಗಳ ಹಾಗೂ ಸಾರ್ವಜನಿಕ ದೇವಾಲಯಗಳಿಗೆ ಈಗಲೂ ದಲಿತರಿಗೆ ಪ್ರವೇಶವಿಲ್ಲ. ದಲಿತ ಸಹೋದರ ಮತ್ತು ಸಹೋದರಿಯರನ್ನು ಎಲ್ಲ ಜಾತಿ, ಸಮುದಾಯಗಳ ಮನೆಗಳ ಒಳಗೆ ಆಹ್ವಾನಿಸುವ 'ಗೃಹಪ್ರವೇಶ'

ಕಾರ್ಯಕ್ರಮವನ್ನು 2014ರಲ್ಲಿ ಡಾ. ಶಿವಪ್ಪ ಅರಿವು ಅವರ ಮನೆಯಿಂದ ಮೊದಲು ಪ್ರಾರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೂ ಕರ್ನಾಟಕದ ಹಲವು ಜಿಲ್ಲೆಗಳಲ್ಲದೆ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿಯೂ ಆಯೋಜಿಸಲಾಗುತ್ತಿದೆ. ಇದರ ಮೂಲಕ ಸವರ್ಣೀಯರ ಮನಃ ಪರಿವರ್ತನೆ ಹಾಗೂ ಅಸ್ಪೃಶ್ಯಮುಕ್ತ ಭಾರತವನ್ನು ನಿರ್ಮಾಣ ಮಾಡುವುದು ಸಂಘಟನೆಯ ಮುಖ್ಯವಾದ ಉದ್ದೇಶವಾಗಿದೆ.

ಪ್ರತಿಜ್ಞಾವಿಧಿ: ಅಸ್ಪೃಶ್ಯತೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಇದು ಮತ್ತೊಂದು ಮಾರ್ಗವಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಜ್ಞೆಯನ್ನು ಬೋಧಿಸುವುದು ಮತ್ತು ಪ್ರತಿಜ್ಞೆಯನ್ನು ಸ್ವೀಕರಿಸುವುದಾಗಿದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಿರುವುದರಿಂದ ಮಕ್ಕಳಲ್ಲಿ ಅಸ್ಪೃಶ್ಯತೆ ಆಚರಣೆಯ ಕರಾಳಮುಖಗಳನ್ನು ತಿಳಿಸುತ್ತಲೇ ಅವರಲ್ಲಿ ಅರಿವನ್ನು ಮೂಡಿಸುವುದಾಗಿದೆ. ಪ್ರತಿಜ್ಞಾವಿಧಿ ಬೋಧನೆಯನ್ನು ರಾಜ್ಯದ ಹಾಗೂ ನೆರೆ ರಾಜ್ಯಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ಮಾಡಲಾಗಿದೆ. ಕೆಲವೊಮ್ಮೆ ಒಂದೇ ದಿನ ಹತ್ತಕ್ಕೂ ಹೆಚ್ಚಿನ ಶಾಲೆ ಕಾಲೇಜುಗಳಲ್ಲಿ ಪ್ರತಿಜ್ಞೆಯನ್ನು ಬೋಧಿಸಲಾಗಿದೆ. ಶಾಲೆ ಕಾಲೇಜುಗಳಲ್ಲಿ ಬೋಧಿಸುವ ಪ್ರತಿಜ್ಞಾವಿಧಿಯೆಂದರೆ: * ಈ ದೇಶದ ಜವಾಬ್ದಾರಿಯುತ ನಾಗರಿಕನಾದ/ಳಾದ ನಾನು, ಅಸ್ಪೃಶ್ಯ ಕಾನೂನುಗಳನ್ನು ಮತ್ತು ಆಚರಣೆಗಳನ್ನು ಗೌರವಿಸುತ್ತೇನೆ. ನಿರ್ಬಂಧಿಸುವ ಆಮಾನವೀಯ ಕಾನೂನುಬಾಹಿರ ಅಸ್ಪೃಶ್ಯ ಆಚರಣೆಗಳನ್ನು ತಿರಸ್ಕರಿಸುತ್ತೇನೆ. ಸಮಾನತೆ ಮತ್ತು ಸ್ವಾತಂತ್ರ್ಯದ ಹಕ್ಕು ಎಲ್ಲರಿಗೂ ಇದೆ ಎಂದು ಒಪ್ಪಿ ಇತರರಿಗೂ ತಿಳಿಸುತ್ತೇನೆ. ಮನೆ, ದೇವಾಲಯ ಹಾಗೂ ಇತರೆ ಸಾರ್ವಜನಿಕ ಸ್ಥಳಗಳ ಪ್ರವೇಶದಲ್ಲಿ ಎಲ್ಲ ಜಾತಿಯ ಜನರನ್ನು ಸಮಾನವಾಗಿ ಕಾಣುತ್ತೇನೆ. ಎಲ್ಲ ಬಗೆಯ ಅಸ್ಪೃಶ್ಯಆಚರಣೆಗಳ ಬಗೆಗೆ ಇತರರಿಗೂ ತಿಳುವಳಿಕೆ ನೀಡಿ ಭಾರತವನ್ನು ಅಸ್ಪೃಶ್ಯತೆ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ."

ಅಸ್ಪೃಶ್ಯತೆಮುಕ್ತ ಮನೆ ಅಭಿಯಾನ: ಅಸ್ಪೃಶ್ಯತೆ ಮುಕ್ತ ಭಾರತ ನಿರ್ಮಾಣದಲ್ಲಿ ಮತ್ತೊಂದು ಹೆಜ್ಜೆಯೇ ಅಸ್ಪೃಶ್ಯಮುಕ್ತ ಮನೆ

ಅಭಿಯಾನ, ಮದ್ದೂರು ತಾಲ್ಲೂಕಿನ ನಗರಕೆರೆಯ ಜಗದೀಶ್ ಅವರ ಮನೆಯಲ್ಲಿ ಮೊದಲಿಗೆ ಈ ಅಭಿಯಾನವನ್ನು ಪ್ರಾರಂಭಿಸಲಾಯಿತು. ಮನೆಯ ಬಾಗಿಲಿಗೆ "ಇದು ಅಸ್ಪೃಶ್ಯತೆ ಮುಕ್ತ ಮನೆ" ಸ್ಟಿಕ್ಕರನ್ನು ಆಂಟಿಸಲಾಗುವುದು. ಇದರಲ್ಲಿ "ನಮ್ಮ ಹಳ್ಳಿಯ ದಲಿತರೂ ಸೇರಿದಂತೆ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಒಳಗೆ ಬನ್ನಿ" ಎಂಬ ಸಂದೇಶವನ್ನು ಸಾರುವುದಾಗಿದೆ. ಮನೆಯ ಹೊರಗೆ ನಿಂತವರು ಈ ಫಲಕವನ್ನು ನೋಡಿದಾಗ ಅವರಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಹೊರಗೆ ನಿಲ್ಲಬೇಕೆಂಬ ಅಳುಕು ಮರೆಯಾಗಿ, ನಾವೆಲ್ಲರೂ ಒಂದೆಂಬ ಮನೋಭಾವದ ಜೊತೆಗೆ ಮನೆಯವರೂ ಕೂಡ ಅಸ್ಪೃಶ್ಯತೆ ಮುಕ್ತ ಭಾರತದೆಡೆಗೆ ಸಾಗುವಂತಾಗುತ್ತದೆ. ಈ ಕಾರ್ಯಕ್ರಮವನ್ನು ಅರಿವುಭಾರತ ಸಂಘಟನೆಯೇ ಮಾಡಬೇಕೆಂದೇನೂ ಇಲ್ಲ. ಯಾರು ಬೇಕಾದರೂ ತಮ್ಮ ಹೆಸರು ಅಥವಾ ಸಂಘಟನೆಯ ಹೆಸರಿನಲ್ಲಿ ಈ ಅಭಿಯಾನದಲ್ಲಿ ಪಾಲ್ಗೊಳ್ಳುವುದರ ಮೂಲಕ ಅಸ್ಪೃಶ್ಯತೆ ಮುಕ್ತ ಭಾರತದ ಅಭಿಯಾನಕ್ಕೆ ಕೈಜೋಡಿಸಬಹುದಾಗಿದೆ.

ದೇವಾಲಯ ಪ್ರವೇಶ: ಭಾರತ ಸಂವಿಧಾನವು ಅಸ್ಪೃಶ್ಯ ಆಚರಣೆಗಳನ್ನು ನಿಷೇಧಿಸಿದೆ. ಆದರೂ ಸಾವಿರಾರು ದೇವಾಲಯ ಮತ್ತು


ಮಠಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ. ದೇವಾಲಯ ಪ್ರವೇಶದ ಮುಖ್ಯ ಉದ್ದೇಶ ದಲಿತರ ಹಕ್ಕುಗಳನ್ನು ಪ್ರತಿಪಾದಿಸುವುದಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ಸಮುದಾಯದೊಟ್ಟಿಗೆ ಕಾಲಾರಾಮ್ ದೇವಾಲಯವನ್ನು ಪ್ರವೇಶಿಸಿದ್ದು ಕೂಡ ಇದೇ ಕಾರಣಕ್ಕೆ, ಕರ್ನಾಟಕ ಸರ್ಕಾರದ ಮುಜರಾಯಿ ದೇವಾಲಯಗಳಲ್ಲಿ ಇತ್ತೀಚೆಗೆ " ಈ ದೇವಾಲಯಕ್ಕೆ ಜಾತಿ ಧರ್ಮ ಲಿಂಗ ಭೇದವಿಲ್ಲದೆ ಎಲ್ಲರಿಗೂ ಮುಕ್ತ ಪ್ರವೇಶವಿದೆ" ಎಂಬ ಫಲಕವನ್ನು ಕಾಣಬಹುದಾಗಿದೆ. ಇದರ ಹಿಂದೆ ಅರಿವುಭಾರತ ಸಂಘಟನೆಯ ಶ್ರಮವಿದೆ. ದೇವಾಲಯ ಪ್ರವೇಶಕ್ಕೆ ಮುಜರಾಯಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ, ತಹಸೀಲ್ದಾರುಗಳಿಗೆ ಮೇಲಿಂದ ಮೇಲೆ ಪತ್ರವನ್ನು ಬರೆದು ಒತ್ತಾಯಿಸಿದ್ದರಿಂದ ಫಲಕವನ್ನು ಅಳವಡಿಸಲಾಗಿದೆ. ಈಗಲೂ ಎಲ್ಲ ದೇವಾಲಯಗಳಿಗೂ ಮುಕ್ತ ಪ್ರವೇಶವಿಲ್ಲ. ಆದರೆ ಈ ಬಗೆಗೆ ನೀವುಗಳು ಭಾಗಿಗಳಾಗಿ ಮೇಲಧಿಕಾರಿಗಳ ಗಮನಕ್ಕೆ ತಂದು ಫಲಕವನ್ನು ಅಳವಡಿಸುವುದಲ್ಲದೆ ಪ್ರವೇಶವನ್ನು ಕಲ್ಪಿಸಬಹುದಾಗಿದೆ. ಇದರಲ್ಲಿ ಇನ್ನೊಂದು ಅಂಶವನ್ನು ಈ ಸಂದರ್ಭದಲ್ಲಿ ಓದುಗರ ಗಮನಕ್ಕೆ ತರಬಯಸುತ್ತೇನೆ. ಕೆಲವರು "ತಾರತಮ್ಯಕವಾದ ದೇವಾಲಯಗಳಿಗೆ ನಮಗೆ ಪ್ರವೇಶ ಬೇಡ, ನೀವು ಏಕೆ ಪ್ರವೇಶ ಮಾಡಿಸುವಿರಿ?" ಎಂದು ಪ್ರಶ್ನಿಸಿದ್ದುಂಟು. ನಮ್ಮ ಉದ್ದೇಶ ಕೇವಲ ದೇವಾಲಯಕ್ಕೆ ಪ್ರವೇಶವನ್ನು ಕಲ್ಪಿಸುವುದು ಅಥವಾ ದಲಿತರನ್ನು ದೇವಾಲಯಗಳ ಭಕ್ತರನ್ನಾಗಿಸುವುದಲ್ಲ. ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವುದು ಮತ್ತು ಸಮಾನತೆಯನ್ನುಂಟು ಮಾಡುವುದಾಗಿದೆ. ಈ ಬಗೆಗೆ ನಮ್ಮ ಕಾರ್ಯಕ್ರಮಗಳಲ್ಲಿಯೇ ಸಾಕಷ್ಟುಬಾರಿ ಸ್ಪಷ್ಟಿಕರಣವನ್ನು ಕೂಡ ಕೊಟ್ಟಿದ್ದೇವೆ.

ಸಹಭೋಜನ ಮತ್ತು ಸಮತೆಯ ಟೀ: ದಲಿತ ಗೃಹಪ್ರವೇಶದ ಮುಂದುವರಿಕೆಯಾಗಿ ಅಥವಾ ಜೊತೆಯಾಗಿ ಈ ಆಂದೋಲನವನ್ನು

ಮಾಡಲಾಗುತ್ತಿದೆ. ದಲಿತರನ್ನು ಕೇವಲ ಮನೆಯೊಳಗೆ ಬಿಟ್ಟುಕೊಳ್ಳುವುದಷ್ಟೇ ಅಲ್ಲ, ಅವರೊಟ್ಟಿಗೆ ಸಹಭೋಜನವನ್ನು ಮಾಡುವುದಾಗಿದೆ. ಕೇವಲ ಸವರ್ಣೀಯರ ಮನೆಗಳಲ್ಲಿ ಸಹಭೋಜನ ಮಾಡುವುದಲ್ಲ; ದಲಿತರ ಮನೆಯಲ್ಲಿಯೂ ಸವರ್ಣೀಯರು ಸಹಭೋಜನವನ್ನು ಮಾಡುವುದಾಗಿದೆ. ಈ ಕಾರ್ಯಕ್ರಮ ಏರ್ಪಡಿಸಲು ಊಟದ ಖರ್ಚಿನ ಬಾಬು ಎದುರಾಗಬಹುದು. ಅದಕ್ಕೆಂದೇ ಸರಳವಾಗಿ ಸಮತೆಯ ಟೀಯನ್ನು ಏರ್ಪಡಿಸಲಾಗುತ್ತಿದೆ. ಎಲ್ಲರೂ ಒಟ್ಟಿಗೆ ಮನೆಯಲ್ಲಿ ಕುಳಿತು ಚಹಾವನ್ನು ಸೇವಿಸುವ ಮೂಲಕ ಅಸ್ಪೃಶ್ಯತೆಯನ್ನು ನಿವಾರಿಸುವುದಾಗಿದೆ. ಒಂದು ಊರು ಒಂದು ನೀರು: ಅಸ್ಪಶ್ಯತೆಯ ಕಬಂಧ ಬಾಹುಗಳು ಹೇಗೆ ಹರಡಿವೆಯೆಂದರೆ ಎಲ್ಲೆಡೆ ತರತಮವನ್ನು ಉಂಟುಮಾಡಿವೆ. "ಕುಡಿವುದೊಂದೇ ನೀರು, ಸುಡುವುದೊಂದೇ ಅಗ್ನಿಯಿರುತಿರಲು ಕುಲಗೋತ್ರ ನಡುವೆ ಎತ್ತಣದು ಸರ್ವಜ್ಞ" ಎಂದು ಸರ್ವಜ್ಞರಾದಿಯಾಗಿ ದಾರ್ಶನಿಕ ಧರ್ಮಸುಧಾರಕರೆಲ್ಲರೂ ಹೇಳಿದ್ದರೂ ಹಳ್ಳಿಗಳಲ್ಲಿ ಇಂದಿಗೂ ಕುಡಿಯುವ ನೀರಿನಲ್ಲಿ ಭೇದಭಾವವಿದೆ. ಸವರ್ಣೀಯರ ಕುಡಿಯುವ ಬಾವಿ ಬೇರೆಯಾದರೆ, ಅಸ್ಪೃಶ್ಯರಿಗೆ ಬಾವಿಗಳು ಬೇರೆ. ಎಲ್ಲಾ ಭಾವಿಗಳಲ್ಲಿ ಎಲ್ಲರೂ ನೀರು ತೆಗೆದುಕೊಳ್ಳುವಂತಾಗಬೇಕೆಂದು ಒಂದು ಊರು ಒಂದು ನೀರು ಪರಿಕಲ್ಪನೆಯನ್ನು ಪ್ರಚಾರಕ್ಕೆ ತರಲಾಗಿದೆ.

ಮರುಮದುವೆ ವೇದಿಕೆ: ಬದುಕಿನಲ್ಲಿ ಆಕಸ್ಮಿಕವಾಗಿ ಜರುಗುವ ಕೆಲವು ಘಟನೆಗಳಿಂದ ಕೆಲವು ಹೆಣ್ಣುಮಕ್ಕಳು ತಮ್ಮ ಗಂಡನನ್ನು

ಕಳೆದುಕೊಳ್ಳಬಹುದು. ಹೆಂಡತಿಯನ್ನು ಕಳೆದುಕೊಂಡ ಗಂಡ ಮತ್ತೊಂದು ಮರುಮದುವೆ ಆಗುತ್ತಾನೆ. ಆದರೆ ಗ್ರಾಮೀಣ ಭಾಗದ ಹೆಣ್ಣಿಗೆ ಇಷ್ಟು ಸ್ವಾತಂತ್ರ್ಯವಿಲ್ಲ. ಜೀವನಪರ್ಯಂತ ಒಂಟಿಯಾಗಿ ಇರಬೇಕಾಗುತ್ತದೆ. ಇದರ ಗಂಭೀರತೆಯನ್ನು ಮನಗಂಡು ಮೊದಲಿಗೆ ವಿಧವೆಯರಿಗೆ ಮರುಮದುವೆಗೆ ವೇದಿಕೆಯನ್ನು ಕಲ್ಪಿಸಲಾಯಿತು. ಮುಂದೆ ವಿಚ್ಛೇದನ ಪಡೆದವರು, ಹೆಂಡತಿಯನ್ನು ಕಳೆದುಕೊಂಡ ವಿದುರರರಿಗೂ ವೇದಿಕೆಯನ್ನು ಕಲ್ಪಿಸಲಾಯಿತು. ಇದಕ್ಕಾಗಿ ರಾಜ್ಯದ ಜಿಲ್ಲಾವಾರು ವೇದಿಕೆಯನ್ನು ನಿರ್ಮಾಣ ಮಾಡಿ ಮರುಮದುವೆಗೆ ವೇದಿಕೆಯನ್ನು ಕಲ್ಪಿಸಲಾಗಿದೆ. ಇದರಿಂದ ಹಲವರು ಬಾಳ ಸಂಗಾತಿಗಳನ್ನು ಪರಸ್ಪರ ಮರುಮದುವೆಯಾಗಿದ್ದಾರೆ. ಈ ರೀತಿಯಲ್ಲಿ ಅರಿವು ಭಾರತ ಸಂಘಟನೆಯು ಕಳೆದ ಹತ್ತು ವರ್ಷಗಳಿಂದ(2014 ರಿಂದ) ಪ್ರಗತಿಪರ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ. ಈ ಕಾರ್ಯಕ್ರಗಳಲ್ಲಿ ಸಚಿವರು, ಸಂಸದರು, ಶಾಸಕರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ಸಮಾಜದ ಮುಖಂಡರು, ವಿವಿಧ ಸಂಘಟನೆಗಳು, ಜಿಲ್ಲಾಧಿಕಾರಿಗಳು, ತಹಸೀಲ್ದಾರರುಗಳು, ಸಮಾಜ ಕಲ್ಯಾಣ ಅಧಿಕಾರಿಗಳು ಮೊದಲಾದವರು ಭಾಗವಹಿಸಿದ್ದಾರೆ. ದೇವನೂರು ಮಹದೇವ ಅವರು ಹೇಳಿದಂತೆ “ಎದೆಗೆ ಬಿದ್ದ ಅಕ್ಷರ, ನೆಲಕ್ಕೆ ಬಿದ್ದ ಬೀಜ ಎಂದಿಗೂ ನಿಷ್ಪಲವಾಗುವುದಿಲ್ಲ. ಒಂದಲ್ಲ ಒಂದು ದಿನ ಫಲವನ್ನು ಕೊಡುತ್ತದೆ" ಎಂಬುದು ನಮ್ಮ ಸಂಘಟನೆಯ ಆಶಯವಾಗಿದೆ. ಆಸ್ಪೃಶ್ಯಮುಕ್ತ ಭಾರತ ನಮ್ಮ ಸಂಘಟನೆಯ ಕನಸು ಮತ್ತು ಆಶಯವಾಗಿದೆ.

ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದವರು: ಡಾ.ಶಿವಪ್ಪ ಅರಿವು, ಎಚ್.ಕೆ.ವಿವೇಕಾನಂದ, ಡಾ.ರುದ್ರೇಶ್ ಅದರಂಗಿ, ಆನಂತ್ ನಾಯಕ್, ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಅಬ್ಬಣಿ ಶಿವಪ್ಪ, ಕೆ.ಆನಂದ್ ಕುಮಾರ್

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims