ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ 'ಕರ್ನಾಟಕ ರಕ್ಷಣಾ ವೇದಿಕೆ'ಯ ರಾಜ್ಯಾಧ್ಯಕ್ಷರಾದ


ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ 'ಕರ್ನಾಟಕ ರಕ್ಷಣಾ ವೇದಿಕೆ'ಯ ರಾಜ್ಯಾಧ್ಯಕ್ಷರಾದ 

 ಟಿ.ಎ. ನಾರಾಯಣಗೌಡರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಈ ಪತ್ರಿಕಾಗೋಷ್ಠಿಯಲ್ಲಿ ಟಿ.ಎ. ನಾರಾಯಣಗೌಡರು ಮಾಧ್ಯಮಗಳ ಜತೆಗೆ ಮಾತನಾಡಿದರು. 

ಮೂರು ಮುಖ್ಯ ವಿಷಯಗಳ ಕುರಿತು ಮಾತನಾಡಲು ಈ ಪತ್ರಿಕಾಗೋಷ್ಠಿಯನ್ನು ಕರೆದಿದ್ದೇನೆ. ಮೂರೂ ವಿಷಯಗಳು ಅತ್ಯಂತ ಪ್ರಮುಖವಾಗಿದ್ದು, ಈ ಬೇಡಿಕೆಗಳು ಈಡೇರುವವರೆಗೆ ಕರ್ನಾಟಕ ರಕ್ಷಣಾ ವೇದಿಕೆ ವಿರಮಿಸುವುದಿಲ್ಲ. ಈ ಚಳವಳಿಯನ್ನು ಯಾವುದೇ ಹಂತಕ್ಕೆ ತೆಗೆದುಕೊಂಡುಹೋಗಲು ನಾವು ಮಾನಸಿಕವಾಗಿ ಸಿದ್ಧವಾಗಿದ್ದೇವೆ. ಈ ಮೂರೂ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾವು ಹಂತಹಂತವಾಗಿ ಪ್ರಜಾಸತ್ತತ್ಮಕ ಚಳವಳಿಯನ್ನು ಸಂಘಟಿಸಲಿದ್ದೇವೆ. ಈ ವಿಷಯಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಳಿ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಿದ್ದೇವೆ. ಸರ್ಕಾರಗಳನ್ನು ಮನವೊಲಿಸುವ ಎಲ್ಲ ಕಾರ್ಯವನ್ನೂ ಮಾಡಲಿದ್ದೇವೆ. ಈ ವಿಷಯಗಳ ಕುರಿತು ಕರ್ನಾಟಕ ರಾಜ್ಯದಾದ್ಯಂತ ವ್ಯಾಪಕವಾದ ಪ್ರಚಾರಾಂದೋಲನ ನಡೆಸಲಿದ್ದೇವೆ. ಕರ್ನಾಟಕದ ಜನತೆಗೆ ಆಗುತ್ತಿರುವ ಅನ್ಯಾಯಗಳ ಕುರಿತು ಅವರಿಗೆ ತಿಳಿಸಲಿದ್ದೇವೆ.

ಈ ಚಳವಳಿಗೆ ಆರಂಭಿಕ ಹಂತದಲ್ಲೇ ಸರ್ಕಾರಗಳು ಸ್ಪಂದಿಸಿ ನಮ್ಮ ಹಕ್ಕೊತ್ತಾಯಗಳನ್ನು ಈಡೇರಿಸಿದರೆ ಅದಕ್ಕಿಂತ ಸಂತೋಷದ ವಿಷಯ ಇನ್ನೊಂದಿರುವುದಿಲ್ಲ. ಆದರೆ ಸರ್ಕಾರಗಳು ನಿರ್ಲಕ್ಷ್ಯ ತೋರಿದರೆ, ಅಸಡ್ಡೆಯಿಂದ ವರ್ತಿಸಿದರೆ ನಾವು ನಮ್ಮ ಚಳವಳಿಯನ್ನು ಅನಿವಾರ್ಯವಾಗಿ ತೀವ್ರಗೊಳಿಸುತ್ತೇವೆ. ಮುಂದೆ ಆಗುವ ಸಮಸ್ಯೆಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಜವಾಬ್ದಾರಿಯಲ್ಲ ಎಂದು ಈ ಮೂಲಕ ಎಚ್ಚರಿಕೆ ನೀಡುತ್ತೇನೆ.

ನಮ್ಮ ಮೂರು ಹಕ್ಕೊತ್ತಾಯಗಳು ಈ ಕೆಳಕಂಡಂತಿವೆ:

1. ಕರ್ನಾಟಕದಲ್ಲಿ ಮಾರಾಟವಾಗುವ/ಬಳಕೆಯಾಗುವ ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ 60ರಷ್ಟು ಬರೆಹಗಳು ಕನ್ನಡದಲ್ಲಿಯೇ ಇರಬೇಕು. ತಾವು ಬಳಕೆ ಮಾಡುವ ವಸ್ತುಗಳ ಹೆಸರೇನು, ಪ್ರಮಾಣವೇನು, ಅವುಗಳ ತಯಾರಿಕೆಗೆ ಏನನ್ನು ಬಳಸಲಾಗಿದೆ ಎಂಬೆಲ್ಲ ವಿಷಯಗಳು ಕನ್ನಡಿಗರಿಗೆ ಕಡ್ಡಾಯವಾಗಿ ಗೊತ್ತಾಗಬೇಕು.

ನೀವೆಲ್ಲ ಗಮನಿಸಿರುವಂತೆ ಕರ್ನಾಟಕದಲ್ಲಿ ಮಾರಾಟವಾಗುವ ಎಲ್ಲ ಬಗ್ಗೆಯ ಉತ್ಪನ್ನಗಳ ಮೇಲೆ ಬರೆಯಲಾಗುವ ಹೆಸರುಗಳು, ಉತ್ಪನ್ನಗಳಿಗೆ ಸಂಬಂಧಿಸಿದ ವಿವರಗಳು, ಉತ್ಪನ್ನ ಗಳನ್ನು ತಯಾರು ಮಾಡಲು ಬಳಸಿದ ವಸ್ತುಗಳ ಹೆಸರು ಮತ್ತು ಪ್ರಮಾಣ, ಉತ್ಪನ್ನಗಳ ತೂಕ/ ಪ್ರಮಾಣ ಮತ್ತು ಬೆಲೆ ಎಲ್ಲವನ್ನೂ ಬಹುತೇಕ ಇಂಗ್ಲಿಷ್ ಭಾಷೆಯಲ್ಲಿ ಮುದ್ರಿಸಲಾಗುತ್ತಿದೆ. ನಾವು ಕರ್ನಾಟಕದಲ್ಲಿ ಇದ್ದೇವೋ ಅಥವಾ ಅಮೆರಿಕದಲ್ಲಿ ಇದ್ದೇವೋ ಎಂಬ ಅನುಮಾನ ಕಾಡುವಷ್ಟು ಇಂಗ್ಲಿಷ್ ಎಲ್ಲ ಉತ್ಪನ್ನಗಳ ಮೇಲೆ ತುಂಬಿಕೊಂಡಿವೆ. ಇದಕ್ಕೆ ಯಾರು ಕಾರಣ?

ಇದನ್ನು ಯಾಕೆ ನಾವು ಸಹಿಸಿಕೊಂಡು ಬಂದಿದ್ದೇವೆ? ಸರ್ಕಾರಗಳು ಇದನ್ನೆಲ್ಲ ನೋಡಿ ಕಣ್ಮುಚ್ಚಿ ಕುಳಿತಿರುವುದು

ಉತ್ಪನ್ನಗಳ ಮೇಲೆ ಮುದ್ರಿಸಲಾಗುವ ಭಾಷೆಗಳಿಗೆ ಸಂಬಂಧಿಸಿದಂತೆ ಜಗತ್ತಿನ ನಾನಾ ದೇಶಗಳು ಬಳಸುವ ಮಾರ್ಗಸೂಚಿಗಳನ್ನು ನಾವು ಗಮನಿಸಬಹುದು, ಎಲ್ಲೂ ಸಹ, ತಮ್ಮ ದೇಶದ್ದಲ್ಲದ, ಸ್ಥಳೀಯವಲ್ಲದ ಭಾಷೆಗಳನ್ನು ಬಳಸಲಾಗುತ್ತಿಲ್ಲ. ಹೀಗಿದ್ದ ಮೇಲೆ ಕರ್ನಾಟಕದಲ್ಲಿ ಮಾರಾಟವಾಗುವ ಉತ್ಪನ್ನಗಳ ಮೇಲೆ ಕನ್ನಡ ಏಕಿಲ್ಲ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ.

ಅಂತರರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ (ಐ ಎಸ್ ಓ) ಉತ್ಪನ್ನಗಳ ಮೇಲೆ ಮುದ್ರಿಸುವ ಭಾಷೆ ಸ್ಥಳೀಯದ್ದೇ ಆಗಿರಬೇಕು. ಸ್ಥಳೀಯ ಜನರು ಓದಿ ಅರ್ಥ ಮಾಡಿಕೊಳ್ಳುವಂಥ ಭಾಷೆ ಆಗಿರಬೇಕು ಎಂದು ಶಿಫಾರಸು ಮಾಡುತ್ತದೆ.

ವಿಶ್ವ ವ್ಯಾಪಾರ ಸಂಸ್ಥೆ (ಡಬ್ಬು ಟಿ ಓ) ಮಾರ್ಗಸೂಚಿಗಳು ಕೂಡ ಇದನ್ನೇ ಹೇಳುತ್ತದೆ. ಅಂತಾರಾಷ್ಟ್ರೀಯ ವ್ಯಾಪಾರದ ಸಂದರ್ಭದಲ್ಲೂ ಉತ್ಪನ್ನಗಳ ಮೇಲಿನ ಬರೆಹಗಳು ಆಮದು ಮಾಡಿಕೊಳ್ಳುವ ದೇಶದ ಭಾಷೆಯಲ್ಲಿರಬೇಕು ಎಂದು ಅದು ಹೇಳುತ್ತದೆ. ಉದಾಹರಣೆಗೆ ಅಮೆರಿಕ ದೇಶವು ಚೀನಾದಿಂದ ಏನನ್ನಾದರೂ ಆಮದು ಮಾಡಿಕೊಳ್ಳುತ್ತಿದ್ದರೆ ಆ ಉತ್ಪನ್ನಗಳ ಮೇಲಿನ ಬರೆಹ ಚೀನೀ ಭಾಷೆಯಲ್ಲಿರಬಾರದು, ಬದಲಾಗಿ ಅಮೆರಿಕದವರಿಗೆ ಅನುಕೂಲವಾಗುವ ಹಾಗೆ ಇಂಗ್ಲಿಷ್ ಭಾಷೆಯಲ್ಲಿರಬೇಕು.

ಜಪಾನ್ ದೇಶದ ಉತ್ಪನ್ನಗಳ ಮೇಲಿನ ಬರೆಹಗಳು ಜಪಾನೀಸ್ ಭಾಷೆಯಲ್ಲೇ ಇರುತ್ತವೆ. ಅದು ಆಮದು ಮಾಡಿಕೊಳ್ಳುವ ಸರಕುಗಳಿಗೆ ಮಾತ್ರ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. ಚೀನಾ ದೇಶದ ಉತ್ಪನ್ನಗಳ ಮೇಲಿನ ಬರೆಹ ಮ್ಯಾಂಡರಿನ್ (ಚೈನೀಸ್) ಭಾಷೆಯಲ್ಲೇ ಇರುತ್ತದೆ. ಆಫ್ರಿಕಾ ದೇಶಗಳು ಬ್ರಿಟಿಷ್ ವಸಾಹತುಗಳಾಗಿದ್ದ ಕಾರಣದಿಂದ ಅಲ್ಲಿ ಇಂಗ್ಲಿಷ್ ಬಳಕೆ ಇದ್ದರೂ, ಸ್ಥಳೀಯ ಭಾಷೆಗಳನ್ನೂ ಸಹ ಬಳಸಲಾಗುತ್ತಿದೆ. ಇದೇ ರೀತಿ ಬ್ರಿಟಿಷ್ ವಸಾಹತುಗಳಾಗಿದ್ದ ದೇಶಗಳಲ್ಲಿ ಇಂಗ್ಲಿಷ್ ಉಳಿದುಕೊಂಡಿದ್ದರೂ ಸ್ಥಳೀಯ ಭಾಷೆಗಳನ್ನೂ ಬಳಸಲಾಗುತ್ತದೆ.

ಉತ್ಪನ್ನಗಳ ಮೇಲೆ ಬರೆಯುವ ಭಾಷೆ ಸ್ಥಳೀಯವೇ ಆಗಿರಬೇಕು ಎಂಬುದು ಜಾಗತಿಕವಾಗಿ ಒಪ್ಪಿ ಅನುಸರಿಸಲಾಗುವ ತತ್ತ್ವ, ಇದಕ್ಕೆ ಕಾರಣವೂ ಸ್ಪಷ್ಟ ಯಾರಿಗೆ ನೀವು ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೀರೋ ಅವರಿಗೆ ಆ ವಸ್ತುಗಳ ಹೆಸರು ಏನೆಂಬುದು ಸ್ಪಷ್ಟವಾಗಿ ತಿಳಿಯಬೇಕು. ಉತ್ಪನ್ನಗಳಿಗೆ ಸಂಬಂಧಿಸಿದ ವಿವರಗಳು, ಉತ್ಪನ್ನ ಗಳನ್ನು ತಯಾರು ಮಾಡಲು ಬಳಸಿದ ವಸ್ತುಗಳ ಹೆಸರು ಮತ್ತು ಪ್ರಮಾಣ, ಉತ್ಪನ್ನಗಳ ತೂಕ/ ಪ್ರಮಾಣ ಮತ್ತು ಬೆಲೆ ಗೊತ್ತಾಗಬೇಕು.

ಆದರೆ ಕರ್ನಾಟಕದಲ್ಲಿ ಮಾರಾಟವಾಗುವ ಯಾವುದೇ ರೀತಿಯ ಉತ್ಪನ್ನಗಳ ಮೇಲೆ ಕನ್ನಡದ ಅಕ್ಷರಗಳನ್ನು ಬೂದುಗಾಜಲ್ಲಿ ಹುಡುಕಿದರೂ ಸಿಗುವುದಿಲ್ಲ. ಎಲ್ಲೋ ಬೆರಳೆಣಿಕೆಯ ಕೆಲವು ವಸ್ತುಗಳ ಮೇಲೆ ಕನ್ನಡ ಇರಬಹುದು: ನೂರಕ್ಕೆ 99 ರಷ್ಟು ವಸ್ತುಗಳ ಮೇಲಿನ ಬರೆಹಗಳು ಇಂಗ್ಲಿಷ್ ನಲ್ಲಿವೆ, ಕೆಲವು ವಸ್ತುಗಳ ಮೇಲೆ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೆ ಕನ್ನಡವಿಲ್ಲ. ಹೀಗೇಕೆ?

ಒಂದು ಉದಾಹರಣೆ ಗಮನಿಸಿ: ನಿಮ್ಮ ಮನೆಯಲ್ಲಿ ದಿನನಿತ್ಯವೂ ಬಳಕೆ ಮಾಡುವ ಗ್ಯಾಸ್ ಸಿಲಿಂಡರ್ ಗಳ ಮೇಲೆ ಯಾವ ಭಾಷೆಯಲ್ಲಿ ಬರೆಯಲಾಗಿದೆ? ಹಿಂದಿ ಮತ್ತು ಇಂಗ್ಲಿಷ್, ಕನ್ನಡದಲ್ಲಿ ಒಂದಕ್ಷರವೂ ಇಲ್ಲ. ಗ್ಯಾಸ್ ಸಿಲಿಂಡರ್ ಗಳನ್ನು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಬಳಸುತ್ತಾರೆ. ಇದರಲ್ಲಿ ಗ್ರಾಮೀಣ ಭಾಗದ ಮಹಿಳೆಯರೂ ಕೂಡ ಇದ್ದಾರೆ. ಗ್ಯಾಸ್ ಸಿಲಿಂಡರ್ ಗಳ ಮೇಲೆ ಹಲವು ಎಚ್ಚರಿಕೆಯ ಸಂದೇಶಗಳನ್ನು ಹಿಂದಿ ಮತ್ತು ಇಂಗ್ಲಿಷ್ ನುಡಿಗಳಲ್ಲಿ ಮುದ್ರಿಸಲಾಗಿರುತ್ತದೆ. ಇದನ್ನು ಕನ್ನಡಿಗರು ಓದಿ ಅರ್ಥ ಮಾಡಿಕೊಂಡಿದ್ದಾರಾ? ಅದು ಸಾಧ್ಯವೇ? ಹಾಗಿದ್ದ ಮೇಲೆ ಯಾವ ಪುರುಷಾರ್ಥಕ್ಕೆ ಹಿಂದಿ ಮತ್ತು ಇಂಗ್ಲಿಷ್ ಬಳಸಲಾಗುತ್ತಿದೆ. ಇದು ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯವಲ್ಲವೇ?

ಕರ್ನಾಟಕದಲ್ಲಿ ವಾಸಿಸುವ ವಲಸಿಗರಿಗೆ, ಕನ್ನಡ ಬಾರದವರಿಗೆ ಅನುಕೂಲವಾಗಲು ಉತ್ಪನ್ನಗಳ ಮೇಲೆ ಕನ್ನಡದ ಜೊತೆ ಇಂಗ್ಲಿಷ್ ನಲ್ಲೂ ಮಾಹಿತಿ ಮುದ್ರಣವಾದರೆ ನಮ್ಮ ಆಕ್ಷೇಪಣೆ ಏನೂ ಇರುತ್ತಿರಲಿಲ್ಲ. ನೂರಕ್ಕೆ ನೂರೂ ಇಂಗ್ಲಿಷ್ ಆದರೆ ಅದನ್ನು ಹೇಗೆ ಸಹಿಸಿಕೊಳ್ಳುವುದು?

ಹೀಗಾಗಿ ಕರ್ನಾಟಕದಲ್ಲಿ ಮಾರಾಟಗೊಳ್ಳುವ ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ.60ರಷ್ಟು ಬರೆಹ ಕನ್ನಡದಲ್ಲಿರಬೇಕು. ಕನ್ನಡೇತರರ ಅನುಕೂಲಕ್ಕೆ ಶೇ. 40ರಷ್ಟು ಭಾಗ ಇಂಗ್ಲಿಷ್ ಬಳಸಿಕೊಳ್ಳಲಿ. ಇತರ ಭಾಷೆಗಳ ಅಗತ್ಯ ನಮಗಿಲ್ಲ. ಇದು ನಮ್ಮ ಸ್ಪಷ್ಟ ನಿಲುವು. ರಾಜ್ಯ ಸರ್ಕಾರ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ. 60ರಷ್ಟು ಭಾಗ ಕನ್ನಡವಿರಬೇಕು ಎಂದು ನೀತಿ ರೂಪಿಸಿದ ಹಾಗೆಯೇ ಕರ್ನಾಟಕದಲ್ಲಿ ಮಾರಾಟಗೊಳ್ಳುವ ಉತ್ಪನ್ನಗಳ ಮೇಲೆ ಶೇ. 60ರಷ್ಟು ಕನ್ನಡವಿರಬೇಕು ಎಂಬ ನೀತಿ ರೂಪಿಸಬೇಕು. ಇದನ್ನು ಜಾರಿಗೊಳಿಸಲು ನೋಡಲ್‌ ಅಧಿಕಾರಿಗಳನ್ನು ನೇಮಿಸಬೇಕು. ನಿಯಮ ಉಲ್ಲಂಘಿಸುವ ಉತ್ಪನ್ನಗಳ ಮಾರಾಟವನ್ನು ಕರ್ನಾಟಕದಲ್ಲಿ ನಿಷೇಧಿಸುವಂಥ ಕಾನೂನು ರೂಪಿಸಬೇಕು ಎಂದು ನಾವು ಆಗ್ರಹಿಸುತ್ತೇವೆ.

2. ಕರ್ನಾಟಕದಲ್ಲಿ ಮಾರಾಟವಾಗುವ/ ಬಳಕೆಯಾಗುವ ಎಲ್ಲ ಬಗೆಯ ಉತ್ಪನ್ನಗಳ ಏಜೆನ್ಸಿಗಳು ಪರಭಾಷಿಕರ ಪಾಲಾಗುತ್ತಿದೆ. ಇದು ಸಾರಾಸಗಟಾಗಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಮತ್ತು ಅಪಮಾನ. ಹೀಗಾಗಿ ಎಲ್ಲ ಉತ್ಪನ್ನಗಳ ಏಜೆನ್ಸಿಗಳು ಕನ್ನಡಿಗರಿಗೇ ಸಿಗಬೇಕು. ಅಥವಾ ಈ ಏಜೆನ್ಸಿಗಳಲ್ಲಿ ಕನ್ನಡಿಗರು ಪಾಲುದಾರರಾಗಿರಬೇಕು.

ಕರ್ನಾಟಕದಲ್ಲಿ ಮಾರಾಟವಾಗುವ ಉತ್ಪನ್ನಗಳ ಏಜೆನ್ಸಿಗಳನ್ನು ಕನ್ನಡಿಗರಲ್ಲದವರಿಗೇ ಕೊಡಲಾಗುತ್ತಿದೆ. ಈ ಏಜೆನ್ಸಿಗಳನ್ನು ನಡೆಸಲು ಅರ್ಹ ಕನ್ನಡಿಗರು ಇಲ್ಲವೇ? ಯಾಕೆ ಕನ್ನಡಿಗರಿಗೆ ಏಜೆನ್ಸಿಗಳನ್ನು ಕೊಡಲಾಗುತ್ತಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಜನಸಂಖ್ಯಾ ನಿಯಂತ್ರಣವನ್ನು ಯಶಸ್ವಿಯಾಗಿ ಜಾರಿಗೆ ತಂದ ರಾಜ್ಯ ಕರ್ನಾಟಕ. ಆದರೆ ಉತ್ತರದ ರಾಜ್ಯಗಳಲ್ಲಿ ಜನಸಂಖ್ಯಾ ಸ್ಪೋಟ ನಡೆದೇ ಇದೆ. ಉತ್ತರದ ರಾಜ್ಯಗಳ ಹೆಚ್ಚುವರಿ ಜನರನ್ನು ದಕ್ಷಿಣಕ್ಕೆ ತುಂಬುವ ಕಾರ್ಯ ಹಲವು ವರ್ಷಗಳಿಂದ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಯಾವುದೇ ರೀತಿಯ ವಸ್ತುಗಳ ಮಾರಾಟದ ಏಜೆನ್ಸಿಗಳು ಪರಭಾಷಿಕರ ಕೈ ಸೇರುತ್ತಿದೆ. ಅಷ್ಟೇ ಅಲ್ಲ, ಈ ಪರಭಾಷಿಕರು ತಮ್ಮ ಏಜೆನ್ಸಿಗಳಲ್ಲಿ ತಮ್ಮ ರಾಜ್ಯದ ಜನರುಗಳನ್ನೇ ಉದ್ಯೋಗಿಗಳನ್ನಾಗಿ ಸೇರಿಸಿಕೊಳ್ಳುತ್ತಿದ್ದಾರೆ. ಕನ್ನಡಿಗರಿಗೆ ಏಜೆನ್ಸಿಯೂ ಇಲ್ಲ, ಏಜೆನ್ಸಿಗಳಲ್ಲಿ ನೌಕರಿಯೇ ಇಲ್ಲದಂತಾಗುತ್ತಿದೆ. ಕರ್ನಾಟಕ ಪರಭಾಷಿಕರ ಪಾಲಿಗೆ 'ಸುರಕ್ಷಿತ ಸ್ವರ್ಗ'ವಾಗಿ ಹೋಗಿದೆ.

ಈ ವ್ಯವಸ್ಥೆ ಮುಂದುವರೆಯಕೂಡದು. ಏಜೆನ್ಸಿಗಳು ಕನ್ನಡಿಗರಿಗೇ ಸಿಗಬೇಕು. ಒಂದು ವೇಳೆ ಇದು ಸಾಧ್ಯವಾಗದೇ ಇದ್ದರೆ ಏಜೆನ್ಸಿಗಳಲ್ಲಿ ಕನಿಷ್ಠಪಕ್ಷ ಕನ್ನಡಿಗರು ಪಾಲುದಾರರಾಗಿರಬೇಕು ಮತ್ತು ಅಲ್ಲಿನ ಉದ್ಯೋಗಗಳನ್ನು ಕನ್ನಡಿಗರಿಗೆ ನೀಡಬೇಕು. ಇದು ನಮ್ಮ ಆಗ್ರಹವಾಗಿದೆ.

3. ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಬಗೆಯ ರಾಷ್ಟ್ರೀಯ/ ಖಾಸಗಿ/ ಗ್ರಾಮೀಣ /ಸಹಕಾರಿ ಬ್ಯಾಂಕ್ ಗಳು, ಫೈನಾನ್ಸ್ ಗಳು, ಚಿನ್ನದ ಅಡಮಾನ ಸಂಸ್ಥೆಗಳು, ಜೀವವಿಮಾ ಸಂಸ್ಥೆಗಳು, ಆರೋಗ್ಯ ವಿಮಾ ಸಂಸ್ಥೆಗಳು ಮತ್ತು ಇತರ ಯಾವುದೇ ಸ್ವರೂಪದ ಹಣಕಾಸು ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಶೇ. 100ರಷ್ಟು ಹುದ್ದೆಗಳು ಮತ್ತು ಇತರೆ ಹುದ್ದೆಗಳಲ್ಲಿ ಶೇ. 60ರಷ್ಟು ಹುದ್ದೆಗಳು ಕನ್ನಡಿಗರಿಗೆ ನೀಡಬೇಕು. ಈ ಎಲ್ಲ ಸಂಸ್ಥೆಗಳು ಬಳಸುವ/ಗ್ರಾಹಕರಿಗೆ ನೀಡುವ ಎಲ್ಲ ದಾಖಲೆಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು.

ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳು ಕನ್ನಡ ಇಲ್ಲಿನ ಆಡಳಿತ ಭಾಷೆ ಎಂಬುದನ್ನು ಮರೆತು ವ್ಯವಹರಿಸುತ್ತಿವೆ. ಅದರ ಜೊತೆಗೆ ಖಾಸಗಿ/ಗ್ರಾಮೀಣ/ ಸಹಕಾರಿ ಬ್ಯಾಂಕ್ ಗಳು, ಫೈನಾನ್ಸ್ ಗಳು, ಚಿನ್ನದ ಅಡಮಾನ ಸಂಸ್ಥೆಗಳು, ಜೀವವಿಮಾ ಸಂಸ್ಥೆಗಳು, ಆರೋಗ್ಯ ವಿಮಾ ಸಂಸ್ಥೆಗಳಲ್ಲೂ ಕನ್ನಡ ಬಳಕೆ ಕಡಿಮೆಯಾಗಿದೆ.

ನಮ್ಮ ನಿರಂತರ ಹೋರಾಟದಿಂದಾಗಿ ಈಗೀಗ ಚಲನ್ ಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ಜೊತೆಗೆ ಕನ್ನಡವೂ ಕಾಣಿಸಿಕೊಂಡಿದೆ. ಕೆಲವು ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಬರೆದ ಚೆಕ್‌ಗಳನ್ನು ತಿರಸ್ಕರಿಸಿದ ಉದಾಹರಣೆಗಳೂ ಉಂಟು. ಇದಕ್ಕೆಲ್ಲ ಮುಖ್ಯ ಕಾರಣ ಮೇಲೆ ಹೇಳಿದ ಎಲ್ಲ ಹಣಕಾಸು ಸಂಸ್ಥೆಗಳಲ್ಲಿ ಕನ್ನಡೇತರ ಸಿಬ್ಬಂದಿ ಅದರಲ್ಲೂ ವಿಶೇಷವಾಗಿ ಉತ್ತರ ಭಾರತೀಯರೇ ತುಂಬಿಕೊಂಡಿರುವುದು. ಇವರು ಹಿಂದಿಯಲ್ಲೇ ಕನ್ನಡಿಗರೊಂದಿಗೆ ವ್ಯವಹಾರ ನಡೆಸುತ್ತಿದ್ದಾರೆ. ಹಿಂದಿ ಬಾರದ ಗ್ರಾಹಕರು ಇದರಿಂದಾಗಿ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕನ್ನಡ ಬಾರದ ಸಿಬ್ಬಂದಿಯನ್ನೇ ನೇಮಿಸಿಕೊಳ್ಳುತ್ತಿರುವುದರಿಂದ ಎಲ್ಲೆಡೆ ಗ್ರಾಹಕರನ್ನು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಬ್ಯಾಂಕುಗಳು/ಹಣಕಾಸು ಸಂಸ್ಥೆಗಳು ಹಿಂದಿಯನ್ನು ಬಳಸಬಾರದು, ಕನ್ನಡ ಮತ್ತು ಇಂಗ್ಲಿಷ್ ಎರಡೇ ಭಾಷೆಯಲ್ಲಿ ವ್ಯವಹರಿಸಬೇಕು. ಆಡಳಿತ ಭಾಷೆ ಮತ್ತು ನಾಡಭಾಷೆಯಾಗಿ ಕನ್ನಡವಿರುತ್ತದೆ. ಕನ್ನಡ ವಾರದವರಿಗೆ ಇಂಗ್ಲಿಷ್ ಇರುತ್ತದೆ. ಮೂರನೇ ಭಾಷೆಯ ಅವಶ್ಯಕತೆ ನಮಗೆ ಇರುವುದಿಲ್ಲ

ಅತ್ಯಂತ ಮುಖ್ಯವಾಗಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕುಗಳ ಸಿಬ್ಬಂದಿ ಕರ್ನಾಟಕದವರೇ ಆಗಿರಬೇಕು. ಹೊರರಾಜ್ಯದ, ಕನ್ನಡ ಬಾರದ ಸಿಬ್ಬಂದಿ ನಿಮ್ಮಲ್ಲಿ ಇದ್ದರೆ ಅವರನ್ನು ಕೂಡಲೇ ತವರು ರಾಜ್ಯಗಳಿಗೆ ವರ್ಗಾಯಿಸಬೇಕು. ಮುಂದೆಯೂ ಸಹ ಕನ್ನಡಿಗರನ್ನು ಮಾತ್ರ ನೇಮಕ ಮಾಡಿಕೊಳ್ಳಬೇಕು. ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ಸಹ ಡಾ.ಸರೋಜಿನಿ ಮಹಿಷಿ ವರದಿಯ ಪರಿಷ್ಕೃತ ವರದಿಯ ಶಿಫಾರಸಿನಂತೆ ಶೇ. ನೂರಕ್ಕೆ ನೂರು ಕನ್ನಡಿಗರಿಗೇ ನೀಡಬೇಕು. ಈ ಮೂರೂ ಹಕ್ಕೊತ್ತಾಯಗಳನ್ನು ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ/ ಕಾರ್ಪೊರೇಟ್ ಸಂಸ್ಥೆಗಳು/ಹಣಕಾಸು ಸಂಸ್ಥೆಗಳು ಈಡೇರಿಸಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಂತಹಂತವಾಗಿ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಿದೆ. ಒಂದು ವೇಳೆ ನಮ್ಮ ಹಕ್ಕೊತ್ತಾಯಗಳು ಈಡೇರದಿದ್ದಲ್ಲಿ ನಾವು ಉಗ್ರ ಸ್ವರೂಪದ ಚಳವಳಿ ಹಮ್ಮಿಕೊಳ್ಳಲಿದ್ದೇವೆ.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation