ಕೊಡಗು ಜಿಲ್ಲೆಯ ಎಮ್ಮೆಮಾಡು ಗ್ರಾಮದಲ್ಲಿ 7 ದಿನಗಳ “ಉರೂಸ್ ಮುಬಾರಕ್” – ಭಕ್ತರ ಪಾಲಿಗೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಮಾಗಮ
ಕೊಡಗು ಜಿಲ್ಲೆಯ ಎಮ್ಮೆಮಾಡು ಗ್ರಾಮದಲ್ಲಿ 7 ದಿನಗಳ “ಉರೂಸ್ ಮುಬಾರಕ್” – ಭಕ್ತರ ಪಾಲಿಗೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಮಾಗಮ
ಬೆಂಗಳೂರು , ಜನವರಿ 29, 2025: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಪ್ರತಿವರ್ಷ ಹಮ್ಮಿಕೊಳ್ಳುವ ಪವಾಡ ಪುರುಷರಾದ ಬಹು. ಹುತ್ ಸೂಫಿ ಶಹೀದ್ (ರ) ಹಾಗೂ ಸೈಯದ್ ಹಸನ್ ಸಖಾಫ್ ಅಲ್ ಹಳರಮಿ (ರ) ಯವರ ನೆನಪಿಗಾಗಿ ನಡೆಯುವ “ಉರೂಸ್ ಮುಬಾರಕ್” ಈ ಬಾರಿ ಫೆಬ್ರವರಿ 21 ರಿಂದ 28, 2025ರವರೆಗೆ ನಡೆಯಲಿದೆ.
ಈ ಮಹೋತ್ಸವದಲ್ಲಿ ಖತಮುಲ್ ಖುರಾನ್, ಧಾರ್ಮಿಕ ಉಪನ್ಯಾಸಗಳು, ಸಾಮೂಹಿಕ ವಿವಾಹ, ಸಾರ್ವಜನಿಕ ಸಮ್ಮೇಳನ ಮತ್ತು ಸಮಾರೋಪ ಸಮಾರಂಭ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ಜಾತಿ-ಮತ ಭೇದವಿಲ್ಲದೆ ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಫೆಬ್ರವರಿ 24, 2025ರಂದು ಆಗಮಿಸುವ ಭಕ್ತರು ಹಾಗೂ ಭಾಂದವರಿಗಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ತಾಜುಲ್ ಇಸ್ಲಾಂ ಮುಸ್ಲಿಂ ಜಮಾ-ಅತ್ನ ಅಧೀನದಲ್ಲಿ ಆಯೋಜಿಸಲಾಗುತ್ತಿದೆ.
ಸಯ್ಯದ್ ಕುಟುಂಬದ ನೇತೃತ್ವದ ಧಾರ್ಮಿಕ ಪಂಡಿತರು, ರಾಜ್ಯ ಹಾಗೂ ಹೊರರಾಜ್ಯಗಳಿಂದ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
400 ವರ್ಷಗಳ ಪರಂಪರೆಯ ಮಹತ್ವ:
ಹಿಜ್ರಿ 11ನೇ ಶತಮಾನದಲ್ಲಿ, ಇಸ್ಲಾಂನ ನವೋತ್ಥಾನ ನಾಯಕರು ಈಜಿಪ್ಟ್ ನಿಂದ ಪ್ರವಾದಿ (ಸ)ವರ ಝಿಯಾರತ್ ಮುಗಿಸಿ ಧರ್ಮಪ್ರಚಾರಕ್ಕಾಗಿ ಕೊಡಗು ತಲುಪಿದರು. ಕೊನೆಗೆ, ಎಮ್ಮೆಮಾಡು ಗ್ರಾಮದಲ್ಲಿ ಅಂತ್ಯವಿಶ್ರಾಂತಿ ಪಡೆದ ಈ ಔಲಿಯಾಗಳ ದರ್ಗಾ ಜನರ ಸಂಕಟಗಳಿಗೆ ಪರಿಹಾರ ದೊರಕುವ ಪುಣ್ಯಸ್ಥಳವಾಗಿ ಬೆಳೆಯುತ್ತಿದೆ.
ಈ ಕಾರ್ಯಕ್ರಮದ ಕುರಿತು ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮಗಳು ಹೆಚ್ಚಿನ ಪ್ರಚಾರ ನೀಡಬೇಕು ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರುನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅಬೂಬಕ್ಕರ್ ಸಕಾಫಿ, ಅಧ್ಯಕ್ಷರು ಮನವಿ ಮಾಡಿದರು.
ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಜಮಾ-ಅತ್ ಸದಸ್ಯರನ್ನು ಸಂಪರ್ಕಿಸಲು 7204882008.
Comments
Post a Comment