ಡಿ.ಕೆ” ಗೆ “ಠಕ್ಕರ್” ಕೊಡಲು “ಸತೀಶ್ ಜಾರಕಿಹೊಳಿ” ಹೆಸ್ರು “ತೇಲಿ”ಬಿಟ್ಟವರು “ಇವರೇ”ನಾ..? ಏಕೆ..?

 

ಬೆಂಗಳೂರು:ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆಯುತ್ತಿದೆ..ಮಗ್ಗಲು ಬದಲಿಸುತ್ತಿದೆ.ದಸರಾ ಮುಗಿದ ಮೇಲೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆಯುತ್ತಿದೆ ಎಂಬ ಭವಿಷ್ಯವಾಣಿ ಬಗ್ಗೆನೇ ಎಲ್ಲರ ಕುತೂಹಲ ನೆಟ್ಟಿದೆ.ಆ ಕ್ಷಿಪ್ರ ರಾಜಕೀಯ ಬೆಳವಣಿಗೆ ಏನು ಎನ್ನುವ ಕುತೂಹಲದ ಬಗ್ಗೆ ಎಲ್ಲರೂ ತಲೆಕೆಡಿಸಿಕೊಂಡಿ ರುವಾಗಲೆ ಮತ್ತೊಂದು ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ದಸರಾ ಬಳಿಕ ರಾಜ್ಯ ರಾಜಕಾರಣ ಮತ್ತೊಂದು ಮಗ್ಗಲು ಬದಲಿಸಲಿದೆ ಎನ್ನುವ  ಭವಿಷ್ಯ ವಾಣಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ..? ಅಥವಾ ಬಲವಂತವಾಗಿ ಅವರಿಂದ ಕೊಡಿಸಲಾಗುತ್ತಾ ಎನ್ನುವುದರತ್ತಲೇ ಸುತ್ತುತ್ತಲಿದೆ.ಬಹುತೇಕ ಅಂದಾಜು ಅದೇ ರೀತಿ ಇದೆ.ಆದರೆ ಪ್ರಕರಣದಲ್ಲಿ ಧಮ್ ಇಲ್ಲ ಎನ್ನುವ ಮತ್ತೊಂದು ಮಾತು ಸಿದ್ದರಾಮಯ್ಯಂಗೆ ಏನೂ ಆಗೋದಿಲ್ಲ ಎನ್ನುವುದನ್ನು ಒತ್ತಿ ಹೇಳುವಂತಿದೆ.ಹಾಗೆಂದ ಮಾತ್ರಕ್ಕೆ ಇಷ್ಟ್ ದಿನ ನಡಿತಿದ್ದ ಬೆಳವಣಿಗೆಗಳು ನಿಂತೋಗಿಬಿಡ್ತವಾ..? ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರಾ..? ಅದರ ಬಗ್ಗೆ ಚರ್ಚೆನೇ  ನಡೆಯೊಲ್ವಾ ಎಂದರೆ..ಖಂಡಿತಾ ಇಲ್ಲ..ರಾಜಕೀಯ ಉಳಿವಿಗಾಗಿಯಾದ್ರೂ ಈ ಒಂದು ಪ್ರಕರಣವನ್ನು ಜೀವಂತವಾಗಿಡಲೇಬೇಕಿದೆ.ಹಾಗಾಗಿ ಅದು ಮುಗಿಯದ ರಾಜಕೀಯ ಪ್ರಹಸನ.

ಈ ಎಲ್ಲಾ ಬೆಳವಣಿ್ಗೆಗಳ ನಡುವೆ ಕೇಳಿಬಂದ ಮತ್ತೊಂದು ಸುದ್ದಿ ತೀವ್ರ ಚರ್ಚೆಗೆ-ಕುತೂಹಲಕ್ಕೆ ಗ್ರಾಸವಾಗಿತ್ತು.ಅದು ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಮುಂದೆ ಅವರ ಸ್ಥಾನಕ್ಕೆ ಯಾರು..? ಎನ್ನುವ ಪ್ರಶ್ನೆ.ಅದಕ್ಕೆ ಉತ್ತರವಾಗಿ ಉತ್ತರ ಕರ್ನಾಟಕದ ಪ್ರಬಲ ಕಾಂಗ್ರೆಸ್ ಮುಖಂಡ ಸತೀಶ ಜಾರಕಿಹೊಳೆ ಎನ್ನುವ ವಿಷಯ.ಅದರಲ್ಲೂ ಜಾರಕಿಹೊಳಿ ಮನೆಗೆ  ಬಿಜೆಪಿ ರಾಜ್ಯಾದ್ಯಕ್ಷ ವಿಜಯೇಂದ್ರ ಭೇಟಿ ಕೊಟ್ಟ ಮೇಲಂತೂ ಜಾರಕಿಹೊಳಿನೇ ಸಿಎಂ ಆಗೋದು ಪಕ್ಕಾ.. ಇದನ್ನು ಅಗತ್ಯಬಿದ್ದರೆ ಬಿಜೆಪಿ ಕೂಡ ಬೆಂಬಲಿಸುತ್ತದೆ ಎನ್ನುವ ಸಂದೇಶವೂ ರಾಜಕೀಯವಾಗಿ ಹರಿದಾಡಿ ದೊಡ್ಡ ಸಂಚಲನವನ್ನೇ ಮೂಡಿಸಿತ್ತು.

ಅದೆಲ್ಲದರ ನಡುವೆ ನಾನೇಕೆ ಸಿಎಂ ಆಗಬಾರದು..? ನನಗೆ ಆ ಅರ್ಹತೆ ಇಲ್ಲವೇ..? ನಾನು ಪಕ್ಷಕ್ಕಾಗಿ ದುಡಿದಿದ್ದೇನೆ..? ಎಂದು ಜಾರಕಿಹೊಳಿ ಕೊಟ್ಟ ಸ್ಟೇಟ್ಮೆಂಟ್ ಗಳಂತೂ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿದ್ವು.ಆದರೆ ಮಾದ್ಯಮಗಳು ಸಿಕ್ಕಾಗ ನಾನು ಹಾಗೆ ಹೇಳಿದ್ದು ನಿಜ.ಆದರೆ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ..ಇದು ಸತ್ಯ ಎಂದು ಹೇಳಿದ ಮೇಲೆ ಕಾಂಗ್ರೆಸ್ ಪಾಳೆಯದಲ್ಲಿ ನಿಟ್ಟುಸಿರುಬಿಡುವಂಥ ವಾತಾವರಣ ಸೃಷ್ಟಿಯಾಗಿತ್ತು.ಆದರೆ ರಾಜಕೀಯ ವಿಪ್ಲವಗಳಾದ್ರೆ ಮುಂದಿನ ಸಿಎಂ ಆಗೊಕ್ಕೆ ಯಾರು ಅರ್ಹರು..ಸಮರ್ಥರು ಎನ್ನುವ ಪ್ರಶ್ನೆ ಸೃಷ್ಟಿಯಾದ್ರೆ ಅದಕ್ಕೆ ನಾನೂ ಒಬ್ಬ ಸಮರ್ಥ ಎನ್ನುವ ಸಂದೇಶವೊಂದನ್ನು ಜಾರಕಿಹೊಳಿ ಈ ರಾಜಕೀಯ ಬೆಳವಣಿಗೆಗಳ ಮೂಲಕ ರವಾನಿಸಿದ್ದಂತೂ ಸತ್ಯ..ಹಾಗಾಗಿ ಮುಂದೆ ಕಾಂಗ್ರೆಸ್ ಪಾಳೆಯದಲ್ಲಿ ಸಿಎಂ ವಿಚಾರ ಬಂದಾಗ ಸತೀಶ್ ಜಾರಕಿಹೊಳಿ ಹೆಸ್ರು ನಿಸ್ಸಂಶಯವಾಗಿ ಮುನ್ನಲೆಗೆ ಬರುವುದರಲ್ಲಿ ಅನುಮಾನವೇ ಇಲ್ಲ.

ನೀವೇ ಗಮನಿಸಿ ನೋಡಿ.. ಇಷ್ಟ್ ವರ್ಷ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ವಿಚಾರ ಚರ್ಚೆಯಾಗುವಾಗ ಸತೀಶ್ ಜಾರಕಿಹೊಳಿ ಹೆಸ್ರು ಮುನ್ನಲೆಗೆ ಬಂದಿದ್ದೇ ಇಲ್ಲ.ಅವರ ಹೆಸರನ್ನು ಚರ್ಚೆ ಮಾಡುವವರೇ ಇಲ್ಲವಾಗಿತ್ತು.ಆದರೆ ಈ ಬಾರಿ ಡಿಕೆಶಿಗೆ ಠಕ್ಕರ್ ಕೊಡುವ ಮಟ್ಟದಲ್ಲಿ,ಒಂದು ಹಂತದಲ್ಲಿ ಡಿಕೆಶಿವಕುಮಾರ್ ಅವರನ್ನೇ ಮೂಲೆಗೆ ತಳ್ಳುವ ಮಟ್ಟದಲ್ಲಿ ಸತೀಶ್ ಅವರ ಹೆಸರು ಕೇಳಿಬಂದಿತ್ತು.ಹಾಗಾದ್ರೆ ಆ ಹೆಸರು ಕೇಳಿಬರೊಕ್ಕೆ ಕಾರಣ ಯಾರು..? ಆ  ಹೆಸರನ್ನು ಪ್ರಸ್ತಾಪ ಮಾಡುವಂತೆ ಮಾಡಿದವರು ಯಾರು..? ಯಾರ ಕೃಪಕಟಾಕ್ಷ ಇದರ ಹಿಂದಿದೆ..? ಯಾರು ಅದಕ್ಕೆ ಕಾರಣ ಕರ್ತರು..? ಎನ್ನುವ ಪ್ರಶ್ನೆ ಸಹಜವಾಗಿ ಕಾಡುತ್ತದೆ..ಚರ್ಚೆಗೆ ಇಲ್ಲದಂಥ ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಮುನ್ನಲೆಗೆ ಬರುವಂತೆ ಮಾಡಿದ್ದು ಬೇರೆ ಯಾರು ಅಲ್ಲವಂತೆ ಅವ್ರೇ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ.

ಕೇಳೊಕ್ಕೆ ಆಶ್ಚರ್ಯ ಎನಿಸಬಹುದು.ಸತೀಶ್ ಜಾರಕಿಹೊಳೆ ಅವರ ಹೆಸರನ್ನು ಕುಮಾರಸ್ವಾಮಿ ಮುನ್ನಲೆಗೆ ಬರುವಂತೆ ಮಾಡಿದ್ದಾ..? ಏಕೆ ಎನ್ನುವ ಪ್ರಶ್ನೆ ಅಚ್ಚರಿಯನ್ನೂ ಮೂಡಿಸುತ್ತದೆ.ಆದರೆ ರಾಜಕೀಯ ಪಡಸಾಲೆಯಲ್ಲಿ ಇಂತದ್ದೊಂದು ಚರ್ಚೆ ಆಗುತ್ತಿರುವುದಂತೂ ಸತ್ಯ.ಜಾರಕಿಹೊಳಿ ಅವರ ಹೆಸರನ್ನು ತೇಲಿಬಿಟ್ಟಿದ್ದೇ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರಂತೆ..ಇದಕ್ಕೆ ಕಾರಣವೂ ಇದೆಯಂತೆ.ಆ ಕಾರಣವೇ, ತಮ್ಮ ರಾಜಕೀಯ ಬದ್ಧ ವೈರಿ ಡಿ.ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ದಕ್ಕಬಾರದೆನ್ನುವುದು.ಶತಾಯಗತಾಯ ಅವರನ್ನು ಸಿಎಂ ಸ್ಥಾನದ ಅಭ್ಯರ್ಥಿಯಾಗಿಸಬಾರದು ಎನ್ನುವ ಕಾರಣದಿಂದಲೇ ಎಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ನಲ್ಲಿರುವ ತಮ್ಮ ಕೆಲವು ಅತ್ಯಾಪ್ತರ ಮೂಲಕ ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಪ್ರಸ್ತಾಪಿಸಿ ಅದು ಪ್ರಬಲವಾಗಿ ಚರ್ಚೆಗೆ ಬರುವಂತೆ ಮಾಡಿದರೆನ್ನುವ ಮಾತು ಕೇಳಿಬರುತ್ತಿದೆ.

ಸಧ್ಯಕ್ಕೆ ರಾಜಕೀಯದಲ್ಲಿ ದೊಡ್ಡ ಮಟ್ಟದ ಶತೃತ್ವ ಇರೋದೇ ಡಿಕೆ ಬ್ರದರ್ಸ್ ಹಾಗೂ ಎಚ್ ಡಿಕೆ ಕುಟುಂಬದ ನಡುವೆ.ಬಹುಷಃ ರಾಜಕೀಯದ ಇತಿಹಾಸದಲ್ಲಿ ಹಿಂದೆಂದೂ ಅವರ ನಡುವೆ ಈ ಮಟ್ಟದ ದ್ವೇಷ-ಮತ್ಸರ-ಅಸೂಯೆ-ಸಂಘರ್ಷ-ವಾಕ್ಸಮರ-ವೈಯುಕ್ತಿಕ ತೇಜೋವಧೆ ನಡೆದಿದ್ದಿಲ್ಲ ಎಂದು ರಾಜಕೀಯ ಮುಖಂಡರೇ ಹೇಳುತ್ತಾರೆ.ಬಹುಷಃ ಇಬ್ಬರು ಎದುರಿಗೆ ಸಿಕ್ಕರೆ ಅವರ ನಡುವೆ ಏನಾಗುತ್ತದೆ ಎಂದು ಊಹಿಸ್ಲಿಕ್ಕಾಗದ ದ್ವೇಷ-ಪ್ರತೀಕಾರ ಹೊಗೆಹಾಡುತ್ತಿದೆ.ಡಿಕೆ ಬ್ರದರ್ಸ್ ಗೆ ಎಚ್ ಡಿಕೆ ಕುಟುಂಬವನ್ನು ಸರ್ವನಾಶ ಮಾಡುವ ಮಟ್ಟದ ದ್ವೇಷ ಇದ್ದರೆ, ಎಚ್ ಡಿಕೆ ಕುಟುಂಬಕ್ಕೆ ಡಿಕೆ ಬ್ರದರ್ಸ್ ನ್ನು ನಾಮೋನಿಶಾನ್ ಇಲ್ಲದಂತೆ ಮುಗಿಸಿಬಿಡುವಷ್ಟರ ಮಟ್ಟಿಗಿನ ಆಕ್ರೋಶವಿದೆ.ಅದು ನಾನಾ ರೀತಿಯಲ್ಲಿ ಬಹಿರಂಗವಾಗುತ್ತಿರುವುದು ದುರಂತವೇ ಸರಿ.

ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲೇ ತೆಗೆದುಕೊಂಡರೆ ಸಿದ್ದರಾಮಯ್ಯ ಅವರ ಸಿಎಂ ಸ್ಥಾನದ ಮೇಲೆ ಯಾವತ್ತೋ ಟವಲ್ ಹಾಕಿ ಕುಂತಿದ್ದಾರೆನ್ನುವ ಆರೋಪ ಡಿಕೆ ಶಿವಕುಮಾರ್ ಮೇಲಿದೆ. ಕಾಂಗ್ರೆಸ್ ಪಾಳೆಯದಲ್ಲೂ ಮೊದಲಿನಿಂದ ಸಿದ್ದು ಬಿಟ್ಟರೆ ಆ ಸ್ಥಾನ ತುಂಬಬಲ್ಲ ಮತ್ತೊಬ್ಬ ಲೀಡರ್ ಎಂದ್ರೆ ಅದು ಡಿಕೆಶಿವಕುಮಾರ್ ಎಂಬ ಮಾತು ಚರ್ಚೆಯಾಗುತ್ತಲೇ ಬಂದಿದೆ.ಮೂಡಾ ಹಗರಣದಲ್ಲಿ ಸಿದ್ದರಾಮಯ್ಯ ಹೆಸರು-ವ್ಯಕ್ತಿತ್ವ-ಕೈ ಎಲ್ಲವನ್ನು ಕೊಳಕು ಮಾಡಿಕೊಂಡ ಮೇಲೆ ಅವರ ರಾಜೀನಾಮೆ ಬಗ್ಗೆ ಚರ್ಚೆ ಶುರುವಾದ್ಮೇಲೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗೋದು ಖಚಿತ ಎನ್ನುವಂತ ಸ್ಥಿತಿ ಇರೋದು ಸತ್ಯ.

ಆದರೆ ಇದು ಡಿಕೆ ಬ್ರದರ್ಸ್ ಕಟ್ಟರ್ ದುಶ್ಮನ್ ಆದ ಎಚ್ ಡಿಕೆ ಕುಟುಂಬಕ್ಕೆ ಸುತಾರಾಂ ಇಷ್ಟವಿಲ್ಲ. ಏಕಂದ್ರೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ನಮ್ಮ ಕುಟುಂಬವನ್ನೇ ಮುಗಿಸಿಬಿಡ್ತಾನೆ ಎನ್ನುವ ಆತಂಕ ಕುಮಾರಸ್ವಾಮಿಗೆ ಇರೋದು ಸತ್ಯ.ಕಾರಣ ಡಿಕೆ ಬ್ರದರ್ಸ್ ಗಳ ಮೊದಲ ಟಾರ್ಗೆಟ್ಟೇ ಎಚ್ ಡಿಕೆ ಕುಟುಂಬ.ಅದನ್ನು ಸರ್ವನಾಶ ಮಾಡಲೇಬೇಕೆನ್ನುವ ಹಠಕ್ಕೆ ಬಿದ್ದವರಂತೆ ಪ್ರಯತ್ನ ಮಾಡ್ತಿದ್ದಾರೆ.ಅದು ಸಾಕಷ್ಟು ರೀತಿಯಲ್ಲಿ ಬಹಿರಂಗ ವಾಗುತ್ತಿದೆ ಕೂಡ.ಡಿಸಿಎಂ ಆಗಿದ್ದೇ ಹೀಗೆ..ಇನ್ನು ಸಿಎಂ ಆಗಿಬಿಟ್ರೆ ತನ್ನ ಪವರ್ ಬಳಸಿ ಈತ ತನ್ನ ಕುಟುಂಬವನ್ನು ಮುಗಿಸೊಕ್ಕೆ ಏನ್ ಬೇಕಾದ್ರೂ ಮಾಡಬಲ್ಲ..ಯಾವ್ ಲೆವಲ್ ಗೆ ಬೇಕಾದ್ರೂ ಆಡಳಿತಯಂತ್ರ ದುರುಪಯೋಗಪಡಿಸಿಕೊಳ್ಳಬಲ್ಲ ಎನ್ನುವ ಭಯ ಕೂಡ ಎಚ್ ಡಿಕೆಗಿದೆ.ಏಕಂದ್ರೆ ಡಿಕೆ ಬ್ರದರ್ಸ್ ಗಳ ದ್ವೇಷದ ರಾಜಕಾರಣ ಯಾವ್ ರೇಂಜ್ನಲ್ಲಿ ತನಗೆ ಥ್ರೆಟ್ ಕೊಡಬಹುದೆನ್ನುವ ಅಂದಾಜು-ಅನುಭವ ಎರಡೂ ಎಚ್ ಡಿಕೆಗಿದೆ.ಹಾಗಾಗಿನೇ ಡಿಕೆ ಶಿವಕುಮಾರ್ ಹೆಸ್ರು ಮುನ್ನಲೆಗೆ ಬರೊಕ್ಕಿಂತ ಹೆಚ್ಚಾಗಿ ಸತೀಶ್ ಜಾರಕಿಹೊಳಿ ಹೆಸರನ್ನು ತೇಲಿಬಿಡುವಂಥ ಕೆಲಸ ಮಾಡಿದ್ರಾ..? ರಾಜಕೀಯ ವಲಯದಲ್ಲಿ ಇಂತದ್ದೊಂದು ಚರ್ಚೆ ನಡೆಯುತ್ತಿರುವುದಂತೂ ಸತ್ಯ.

ಎಚ್ ಡಿ ಕುಮಾರಸ್ವಾಮಿಗೆ ಡಿಕೆ ಶಿವಕುಮಾರ್ ಅವರನ್ನು ಬಿಟ್ಟು ಕಾಂಗ್ರೆಸ್ ನಲ್ಲಿ ಯಾರೇ ಸಿಎಂ ಆದ್ರೂ ಚಿಂತೆಯಿಲ್ಲ..ಹೆದರಿಕೆ ಇಲ್ವಂತೆ.ಆ ಕಾರಣಕ್ಕೆ ಏನೋ..ಮೂಡಾ ಹಗರಣದಲ್ಲಿ ಸಿದ್ದರಾಮಯ್ಯ ರಾಜೀ ನಾಮೆ ಕೊಡಬೇಕೆಂದು ಕಾಂಗ್ರೆಸ್ ಆದಿಯಾಗಿ ಬಿಜೆಪಿಯ ನಾಯಕರುಗಳು ಒತ್ತಾಯಿಸಿದ್ರೂ ಕುಮಾರಸ್ವಾ ಮಿ ಮಾತ್ರ ರಾಜೀನಾಮೆಗೆ ಒತ್ತಾಯಿಸಿಯೇ ಇಲ್ಲ.ಸಿಎಂ ಸ್ಥಾನದಲ್ಲಿದ್ದುಕೊಂಡೇ ಸಿದ್ದರಾಮಯ್ಯ ತನಿಖೆ ಎದುರಿಸಲಿ ಎಂದು ಸಲಹೆ ಕೊಟ್ಟು ಸುಮ್ಮನಾಗಿದ್ದಾರೆ.ಇದೆಲ್ಲಾ ಎಚ್ ಡಿಕೆ ತನ್ನ ಕುಟುಂಬವನ್ನು ಡಿಕೆ ಬ್ರದರ್ಸ್ ದ್ವೇಷದ ರಾಜಕಾರಣದಿಂದ ಬಚಾವು ಮಾಡುವಂತ ಪ್ಲ್ಯಾನ್ ಎಂದೂ ಹೇಳಲಾಗುತ್ತಿದೆ.

ಹಾಗೆ ನೋಡಿದ್ರೆ ಎಚ್ ಡಿ ಕುಮಾರಸ್ವಾಮಿ ಸಂಬಂದ ಸತೀಶ್ ಜಾರಕಿಹೊಳಿ ಜತೆ ತುಂಬಾ ಚೆನ್ನಾಗಿಯೇ ಇದೆ.ಅವರಿಬ್ಬರೂ ಸರ್ಕಾರದಲ್ಲಿ ಒಟ್ಟಿಗೆ ಕೆಲಸ ಮಾಡಿದವರು.ಸಿದ್ದರಾಮಯ್ಯ ಸಿಎಂ ಆಗಿ ಮುಂದುವ ರೆದರೂ ನಮಗೆ ಸಮಸ್ಯೆಯಿಲ್ಲ.ಅಥವಾ ಅವರು ರಾಜೀನಾಮೆ ಕೊಟ್ಟರೆ ಅವರ ಸ್ಥಾನದಲ್ಲಿ ಸತೀಶ್ ಜಾರಕಿಹೊಳಿ ಸಿಎಂ ಆಗಿ ಪ್ರತಿಷ್ಟಾಪನೆಗೊಂಡರೂ ಅಭ್ಯಂತರವಿಲ್ಲ ಎನ್ನುವುದು ಕುಮಾರಸ್ವಾಮಿ ಮನಸ್ತಿತಿ. ಹಾಗಾಗಿನೇ ಸತೀಶ್ ಜಾರಕಿಹೊಳಿ ಹೆಸರನ್ನು ಕಾಂಗ್ರೆಸ್ ನಲ್ಲಿರುವ ಕೆಲವು ತಮ್ಮ ಆಪ್ತರ ಮೂಲಕ ಹರಿಯಬಿಟ್ಟರೆನ್ನುವ ಮಾತಿದೆ.ಅದು ಕುಮಾರಸ್ವಾಮಿ ನಿರೀಕ್ಷೆ ಹಾಗು ಲೆಕ್ಕಾಚಾರದಂತೆ ವರ್ಕೌಟ್ ಆಗಿದ್ದೂ ಸತ್ಯ.

ಈ ಎಲ್ಲಾ ಬೆಳವಣಿಗೆಗಳ ನಂತರ ಸತೀಶ್ ಜಾರಕಿಹೊಳಿ ಹೆಸರು ಸಿಎಂ ರೇಸ್ ನಲ್ಲಿ ಇಂದು, ನಾಳೆ, ಯಾವಾಗ ಪ್ರಸ್ತಾಪವಾದ್ರೂ ಚರ್ಚೆಗೆ ಬರುವಂತಾಗಿದ್ದು ಸುಳ್ಳಲ್ಲ. ಕಾಂಗ್ರೆಸ್ ಹೈಕಮಾಂಡ್ ಕೂಡ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸುವಂತಾಯ್ತು. ಡಿಕೆಶಿಗೆ ಕಾಂಗ್ರೆಸ್ ನಲ್ಲಿ ಸಿಎಂ ರೇಸ್ ನಲ್ಲಿ ಸೆಡ್ಡು ಹೊಡೆಯಬಲ್ಲ ಯಾವುದಾದ್ರೂ ಒಬ್ಬ ನಾಯಕನಿದ್ದಾನೆ ಎಂದ್ರೆ ಅದು ಸತೀಶ್ ಜಾರಕಿಹೊಳಿ ಎನ್ನುವ ಮೆಸೇಜ್ ಒಂದು ರವಾನೆಯಾದಂತಾಯ್ತು.ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದುರುಳಿಸುವ ಎಚ್ ಡಿಕೆ  ತಂತ್ರಗಾರಿಕೆ ಸಧ್ಯಕ್ಕೆ ವರ್ಕೌಟ್ ಆಗಿರುವುದಂತೂ ಸತ್ಯ.ಎಚ್ ಡಿಕೆ ಅವರ ಈ ತಂತ್ರಗಾರಿಕೆ ಡಿಕೆ ಶಿವಕುಮಾರ್ ಗೆ ಒಂದು ಕ್ಷಣ ಮರ್ಮಾಘಾತ ನೀಡಿದ್ದರೂ ಆಶ್ಚರ್ಯವಿಲ್ಲ.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation