ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ 2024
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ 2024
ಬೆಂಗಳೂರು : ಹೆಣ್ಣು ಮಗುವಿನ ಸುರಕ್ಷತೆ ಮತ್ತು ಶಿಕ್ಷಣದ ಬಗ್ಗೆ
ಪ್ರತಿಯೊಬ್ಬರೂ ಗಮನಹರಿಸಬೇಕು ಎಂದು ನಟಿ ಪ್ರಿಯಾಂಕ ಉಪೇಂದ್ರ ಅವರು ತಿಳಿಸಿದರು. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಓಣಿಯವರ ಸೇವಾ ಕೂಟ BOSCO ವತಿಯಿಂದ ಆಯೋಜಿಸಲಾಗಿದ್ದ ಸುಸ್ಥಿರ ಅಭಿವೃದ್ಧಿಗಾಗಿ ಬಾಲಕಿಯರ ಧ್ವನಿಯನ್ನು ಹೆಚ್ಚಿಸುವುದು ಎಂಬ ಶೀರ್ಷಿಕೆಯಲ್ಲಿ ಆಯೋಜಿಸಲಾಗಿದ್ದ ಜಾಗತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಶಿಕ್ಷಣವು ಶಕ್ತಿಯುತ ಸಾಧನವಾಗಿದ್ದು, ಅದರ ಮೂಲಕ ನೀವು ಜ್ಞಾನ, ಆತ್ಮವಿಶ್ವಾಸ, ನಿಮ್ಮ ಗುರಿಗಳನ್ನು ತಲುಪಲು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯುತ್ತೀರಿ ಎಂದು ಹೆಣ್ಣು ಮಕ್ಕಳಿಗೆ ಕಿವಿಮಾತು ಹೇಳಿದರು. ಹೆಣ್ಣು ಭ್ರೂಣಹತ್ಯೆ, ವರದಕ್ಷಿಣೆ, ಬಾಲ್ಯವಿವಾಹ, ಅತ್ಯಾಚಾರ, ಅದರಲ್ಲೂ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ, ಬಡತನ, ಅನಕ್ಷರತೆ, ಲಿಂಗ ತಾರತಮ್ಯ, ಅಪೌಷ್ಟಿಕತೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಹೆಣ್ಣಿಗೆ ರಕ್ಷಣೆ ಈ ಆಧುನಿಕ ಯುಗದಲ್ಲೂ ಅನಿವಾರ್ಯ. ಕಲಿತ ಹೆಣ್ಣು ಕೂಡ ಉದ್ಯೋಗದ ಸ್ಥಳದಲ್ಲಿ ದೌರ್ಜನ್ಯ ಅನುಭವಿಸುವುದು ನೋಡಿದ್ದೇವೆ. ಇಂತಹ ಎಲ್ಲಾ ಸಂಕಷ್ಟಗಳನ್ನು ಮೀರಿ ನಿಲ್ಲಲು ಹೆಣ್ಣುಮಕ್ಕಳನ್ನು ರಕ್ಷಿಸಿ, ಅವರಿಗೆ ಸೂಕ್ತ ಶಿಕ್ಷಣ ಕೊಡಿಸುವುದು ಮತ್ತು ಹೆಣ್ಣುಮಕ್ಕಳ ಹಕ್ಕುಗಳ ಬಗ್ಗೆ ನಾವೂ ಹೆಚ್ಚಿನ ಅರಿವು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಲಿಂಗ ಸಮಾನತೆ ಮತ್ತು ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿಸಿಕೊಡಲು ಎಲ್ಲರೂ ಶ್ರಮಿಸಬೇಕು ಎಂದು ಫಾ.ವರ್ಗೀಸ್ ಪಲ್ಲಿಪುರಂ ಪ್ರೇರೇಪಿಸಿದರು.
ಕಾರ್ಯಕ್ರಮವು ಲಾಲ್‌ಬಾಗ್ ಗೇಟ್‌ನ ಹಾಪ್‌ಕಾಮ್ಸ್‌ನಿಂದ ಸಹಿ ಅಭಿಯಾನದೊಂದಿಗೆ ಜಾಗೃತಿ ಮೂಡಿಸುವ ರ್ಯಾಲಿಯನ್ನು ಒಳಗೊಂಡಿತ್ತು. ಹೆಣ್ಣು ಮಗುವಿನ ಮಹತ್ವ ಸಾರುವ ಕಿರುನಾಟಕವನ್ನು ಮಕ್ಕಳು ಪ್ರದರ್ಶಿಸಿದರು.
ಈ ಜಾಗೃತ ಜಾಥಾದಲ್ಲಿ ಸಂಚಾರಿ ಸಬ್ ಇನ್ಸ್ಪೆಕ್ಟರ್ ಸಿದ್ದರಾಜು, ಆರ್‌ಟಿಐ ಕಾರ್ಯಕರ್ತರಾದ ಅಂಬರೇಶ್, ಸಿಟಿ ಡೆಸ್ಕ್ ಸಂಯೋಜಕಿ ಮಂಜುಳಾ ಉಳ್ಳಾಲ್, ಸಹಾಯಕ ಪ್ರಾಂಶುಪಾಲರಾದ ಸುಮಂಗಲ ರವರು ಸೇರಿದಂತೆ ಇತರರು ಭಾಗವಹಿಸಿದ್ದರು.


Comments
Post a Comment