Traffic Fine | ಸಂಚಾರ ನಿಯಮ ಉಲ್ಲಂಘಿಸಿದ್ರಾ? ಇಲ್ಲಿದೆ ನಿಮಗೆ ಶುಭ ಸುದ್ದಿ: ಈಗಲೇ ದಂಡ ಕಟ್ಟಿದರೆ ಶೇ 50 ಡಿಸ್ಕೌಂಟ್!.
Traffic Fine | ಸಂಚಾರ ನಿಯಮ ಉಲ್ಲಂಘಿಸಿದ್ರಾ? ಇಲ್ಲಿದೆ ನಿಮಗೆ ಶುಭ ಸುದ್ದಿ: ಈಗಲೇ ದಂಡ ಕಟ್ಟಿದರೆ ಶೇ 50 ಡಿಸ್ಕೌಂಟ್!.
Traffic violation fine: ಸಂಚಾರ ನಿಯಮ ಉಲ್ಲಂಘಿಸಿರುವ ನೂರಾರು ಪ್ರಕರಣಗಳು ಬಾಕಿ ಉಳಿದಿವೆ. ಆ ಪ್ರಕರಣಗಳಲ್ಲಿ ಪಾವತಿಯಾಗಬೇಕಿರುವ ದಂಡದ ಪ್ರಮಾಣ 1300 ಕೋಟಿ ರೂಪಾಯಿ ದಾಟುತ್ತದೆ. ದಂಡ ಪಾವತಿಯ ಮೂಲಕ ಪ್ರಕರಣಗಳನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಸರಕಾರವು ಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಈ ಹಿಂದೆ ತೆಲಂಗಾಣದಲ್ಲಿ ನೀಡಿದ್ದಂತೆ ರಾಜ್ಯದಲ್ಲೂ ದಂಡದ ಮೊತ್ತದ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಲಾಗಿದೆ.
ಹೈಲೈಟ್ಸ್:
- ಕಾನೂನು ಸೇವಾ ಪ್ರಾಧಿಕಾರದ ಶಿಫಾರಸು ಆಧರಿಸಿ ಸರಕಾರದ ಆದೇಶ
- 1300 ಕೋಟಿ ರೂಪಾಯಿಗೂ ಅಧಿಕ ದಂಡದ ಮೊತ್ತ ಬಾಕಿ
- ಫೆ.11ರೊಳಗೆ ದಂಡ ಕಟ್ಟಿದರೆ ಅಂತಹವರಿಗೆ ರಿಯಾಯಿತಿ
- 2022ರಲ್ಲಿ ತೆಲಂಗಾಣ ರಾಜ್ಯದಲ್ಲಿ ಇದೇ ರೀತಿ ಕ್ರಮಕೈಗೊಳ್ಳಲಾಗಿತ್ತು.
ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ದಂಡದ (traffic violation fine) ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದೀರಾ? ಹಾಗಿದ್ದರೆ, ಇಲ್ಲಿದೆ ನಿಮಗೊಂದು ಶುಭ ಸುದ್ದಿ.
ಸಂಚಾರ ನಿಯಮ ಉಲ್ಲಂಘಿಸಿ ದಂಡದ ಮೊತ್ತವನ್ನು ಕಟ್ಟದೆ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ಸರಕಾರ ಭರ್ಜರಿ ರಿಯಾಯಿತಿ ಘೋಷಿಸಿದೆ. ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಶಿಫಾರಸಿನ ಮೇರೆಗೆ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲು ಸರಕಾರ ಆದೇಶ ಹೊರಡಿಸಿದೆ.
1300 ಕೋಟಿ ರೂ.ಗೂ ಅಧಿಕ ದಂಡದ ಮೊತ್ತ ಬಾಕಿ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಹಾಗೂ ಇದರಿಂದ ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕಳೆದ ಜ.27ರಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ‍್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಲಾಗಿತ್ತು. ನಂತರ ಕಾನೂನು ಸೇವೆಗಳ ಪ್ರಾಧಿಕಾರ ಸರಕಾರಕ್ಕೆ ಈ ಕುರಿತು ಶಿಫಾರಸು ಮಾಡಿತ್ತು. ಅದರಂತೆ, ಶೇ.50ರಷ್ಟು ರಿಯಾಯಿತಿ ನೀಡಲು ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ದಂಡದ ಮೊತ್ತ ಬಾಕಿ ಉಳಿಸಿಕೊಂಡಿರುವವರು ಫೆ.11ರೊಳಗೆ ದಂಡ ಕಟ್ಟಿದರೆ ಅಂತಹವರು ರಿಯಾಯಿತಿ ಪಡೆಯಬಹುದಾಗಿದೆ. ಫೆ.11ರ ರಾಜ್ಯವ್ಯಾಪಿ ರಾಷ್ಟ್ರೀಯ ಲೋಕ ಅದಾಲತ್ ಹಿನ್ನೆಲೆಯಲ್ಲಿ ಈ ರಿಯಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ.
2022ರಲ್ಲಿ ತೆಲಂಗಾಣ ರಾಜ್ಯದಲ್ಲಿ ಇದೇ ರೀತಿ ಸಂಚಾರ ಇ-ಚಲನ್ ಮೂಲಕ ವಿಧಿಸಿದ್ದ ದಂಡದ ಮೊತ್ತಕ್ಕೆ ವಿನಾಯಿತಿ ನೀಡಿದ್ದರಿಂದ ಅಲ್ಲಿನ ಜನರು ಸರದಿಯಲ್ಲಿ ನಿಂತು ಬಾಕಿ ಕಟ್ಟಿದ್ದರು. ಹಾಗಾಗಿ, ಆ ರಾಜ್ಯದಿಂದ ಆದೇಶಗಳ ಪ್ರತಿ ತರಿಸಿಕೊಂಡು, ನ್ಯಾ.ವೀರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸರಕಾರ ಈಗ ರಿಯಾಯಿತಿ ನೀಡಿದೆ. ಪೊಲೀಸ್ ಇಲಾಖೆ ಬಾಕಿ ಸಂಗ್ರಹಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ,” ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್ ‘ವಿಕ’ಗೆ ತಿಳಿಸಿದರು.
ರಾಜ್ಯದಲ್ಲಿ ಸಂಚಾರ ಪೊಲಿಸರು ವಿಧಿಸಿರುವ ದಂಡದ ಮೊತ್ತದಲ್ಲಿ ಸುಮಾರು 1300 ಕೋಟಿ ರೂ. ಬಾಕಿ ಇತ್ತು. ಆ ಕುರಿತು ಸರಕಾರಕ್ಕೆ ಪ್ರಾಧಿಕಾರ ಸಲಹೆ ನೀಡಿತ್ತು. ಅದನ್ನು ಪರಿಗಣಿಸಿ ಸರಕಾರ ದಂಡದ ಮೊತ್ತದಲ್ಲಿ ಶೇ.50ರಷ್ಟು ವಿನಾಯಿತಿ ನೀಡಿದ್ದು, ಸಾರ್ವಜನಿಕರು ಇದನ್ನು ಸದುಪಯೋಗ ಮಾಡಿಕೊಳ್ಳಬೇಕು.

Comments
Post a Comment