JDS(S) :ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ 6-7 ಅಭ್ಯರ್ಥಿಗಳ ಬದಲಾವಣೆ…!

 

JDS(S) :ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ 6-7 ಅಭ್ಯರ್ಥಿಗಳ ಬದಲಾವಣೆ…!

IMG 20230205 WA0003

ಘೋಷಿತ 93 ಅಭ್ಯರ್ಥಿಗಳ ಸಭೆ ಕರೆದ ಮಾಜಿ ಸಿಎಂ

ಅಭ್ಯರ್ಥಿಗಳಿಗೆ ಖಡಕ್ ಕ್ಲಾಸ್ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ 6-7 ಅಭ್ಯರ್ಥಿಗಳ ಬದಲಾವಣೆ ಸುಳಿವು ಕೊಟ್ಟ ಮಾಜಿ ಮುಖ್ಯಮಂತ್ರಿ


ಬೆಂಗಳೂರು: ಚುನಾವಣೆಗೆ ಕೇವಲ ಇನ್ನೆರಡು ತಿಂಗಳು ಮಾತ್ರ ಇದ್ದು, ಯಾವಾಗ ಬೇಕಾದರೂ ಚುನಾವಣೆ ದಿನಾಂಕ ಪ್ರಕಟ ಆಗಬಹುದು. ಆದ್ದರಿಂದ ಎಲ್ಲ ಘೋಷಿತ ಅಭ್ಯರ್ಥಿಗಳು ವೇಗವಾಗಿ ಜನರನ್ನು ತಲುಪುವ ಕೆಲಸ ಮಾಡಬೇಕು. ಯಾರಾದರೂ ಉದಾಸೀನ ಮಾಡಿದರೆ ಅಂಥ ಅಭ್ಯರ್ಥಿಗಳನ್ನು ಮುಲಾಜಿಲ್ಲದೆ ಬದಲಾವಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಖಡಕ್ ವಾರ್ನಿಂಗ್ ಕೊಟ್ಟರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಕರೆಯಲಾಗಿದ್ದ ಮೊದಲ ಪಟ್ಟಿಯಲ್ಲಿರುವ 93 ಅಭ್ಯರ್ಥಿಗಳ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ಮಾತನಾಡಿದರು.

61 ಕ್ಷೇತ್ರಗಳಲ್ಲಿ ಪಂಚರತ್ನ ರಥಯಾತ್ರೆ ಮುಗಿಸಿ ಬೆಂಗಳೂರಿಗೆ ವಾಪಸಾದ ನಂತರ ಅಭ್ಯರ್ಥಿಗಳ ಸಭೆ ಕರೆದಿದ್ದ ಮಾಜಿ ಮುಖ್ಯಮಂತ್ರಿಗಳು, ಇನ್ನು ಎರಡು ತಿಂಗಳು ಅಭ್ಯರ್ಥಿಗಳು ಸಾಗಬೇಕಾದ ಗೆಲುವಿನ ಹಾದಿಯ ಬಗ್ಗೆ ದಿಕ್ಸೂಚಿ ನಿಗದಿ ಮಾಡಿದರು.

ಅಲ್ಲದೆ, ಮನೆ ಮನೆಗೂ ಪಂಚರತ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದ ಮೂಲಕ ಜನರ ಬಳಿಗೆ ತಲುಪಲು ಅಭ್ಯರ್ಥಿಗಳಿಗೆ ಟಾಸ್ಕ್ ನೀಡಲಾಗಿದೆ. ಮುಂದಿನ ಎರಡೂವರೆ ತಿಂಗಳು ಅಭ್ಯರ್ಥಿಗಳು ವಾರಕ್ಕೆ ಕೊನೆಯ ಪಕ್ಷ ಮೂರು ದಿನ ವಿವಿಧ ಗ್ರಾಮಗಳಲ್ಲಿ ವಾಸ್ತವ್ಯ ಹೂಡಬೇಕು ಎಂದು ಅವರು ಅಭ್ಯರ್ಥಿಗಳಿಗೆ ತಾಕೀತು ಮಾಡಿದರು.

ಕೆಲ ಅಭ್ಯರ್ಥಿಗಳು ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ, ಇನ್ನು ಕೆಲವರು ಇನ್ನೂ ಟೇಕಾಫ್ ಆಗಿಲ್ಲ ಎಂದು ಟೇಕಾಫ್ ಆಗದ ಅಭ್ಯರ್ಥಿಗಳಿಗೆ ಚಾಟಿ ಬೀಸಿದ ಕುಮಾರಸ್ವಾಮಿ ಅವರು, ಪಂಚರತ್ನ ರಥಯಾತ್ರೆ ಯಶಸ್ಸಿನ ಬಗ್ಗೆ ಹಾಗೂ ಸ್ಪಂದನೆ ಬಗ್ಗೆ ಅಭ್ಯರ್ಥಿಗಳಿಗೆ ಮಾಹಿತಿ ನೀಡಿದರು.

ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪರ ಅಲೆ ಎದ್ದಿದೆ
ಈ ಅವಕಾಶವನ್ನು ಎಲ್ಲಾ ಅಭ್ಯರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ನನ್ನ ಆರೋಗ್ಯ ಲೆಕ್ಕಿಸದೆ ರಥಯಾತ್ರೆ ನಡೆಸುತ್ತಿದ್ದೇನೆ. ನನ್ನ ಆರೋಗ್ಯಕ್ಕಿಂತ ಜನರ ಹಿತ ಮುಖ್ಯ ಎಂದು ಅವರು ಅಭ್ಯರ್ಥಿಗಳಿಗೆ ತಿಳಿಸಿದರು.

IMG 20230205 WA0001
ಅಭ್ಯರ್ಥಿಗಳ ಸಭೆ

ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ, ಹಿರಿಯ ನಾಗರಿಕರಿಗೆ 5000 ರು. ಮಾಸಾಶನ, ವಿಕಲಚೇತನರು ಹಾಗೂ ವಿಧವೆಯರಿಗೆ 2500 ರು. ಮಾಶಾಸನ ನೀಡುವ ಬಗ್ಗೆ ಜನರಿಗೆ ತಿಳಿಸಿ. 2006 ಹಾಗೂ 2018ರಲ್ಲಿ ನಾವು ಸಾಲ ಮನ್ನಾ ಬಗ್ಗೆ ಜನರಿಗೆ ತಿಳಿಸಿ, ಸಾಲ ಮನ್ನಾ ಆಗದಿರುವ ಎರಡು ಲಕ್ಷ ಕುಟುಂಬಗಳಿಗೆ ಬಿಜೆಪಿ ಸರಕಾರ ಮಾಡಿದ ಅನ್ಯಾಯದ ಬಗ್ಗೆ ಜನತೆಗೆ ಮಾಹಿತಿ ನೀಡಿ ಎಂದು ಕುಮಾರಸ್ವಾಮಿ ಅವರು ಸಭೆಯಲ್ಲಿ ಹೇಳಿದರು.

ಪಂಚರತ್ನ ಯೋಜನೆಗಳ ಬಗ್ಗೆ ಮನೆ ಮನೆಗೂ ಮಾಹಿತಿ ನೀಡಿ, ಮನೆ ಮನೆಗೂ ಪಂಚರತ್ನ ಕಾರ್ಯಕ್ರಮವನ್ನು ಯಶಸ್ಸು ಮಾಡಬೇಕು. ಜನರಿಗೆ ವಿಶ್ವಾಸ ಬರುವಂತೆ ವರ್ತಿಸಿ, ಆ ರೀತಿಯಲ್ಲಿ ಮಾಹಿತಿ ನೀಡಿ ಎಂದು ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.

ಕೆಲ ಅಭ್ಯರ್ಥಿಗಳ ಬಗ್ಗೆ ಅತೃಪ್ತಿ:

ಸುಮ್ಮನೆ ಮನೆಯಲ್ಲಿ ಕೂತು ಗೆಲ್ಲಬೇಕು ಎಂದರೆ ಗೆಲ್ಲಲು ಸಾಧ್ಯ ಇಲ್ಲ. ಕೆಲ ಕ್ಷೇತ್ರಗಳಲ್ಲಿ ನಾವು ಹಾಕಿರುವ ಅಭ್ಯರ್ಥಿಗಳು ಹಾಗೂ ಆಯಾ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆಗೆ ಸಿಕ್ಕಿರುವ ಸ್ಪಂದನೆ ಬಿಜೆಪಿ ಕಾಂಗ್ರೆಸ್ ಪ್ರಮುಖ ದಿಗ್ಗಜ ನಾಯಕರ ನಿದ್ದೆಗೆಡುವಂತೆ ಮಾಡಿದೆ. ಕೆಲಸ ಮಾಡದ, ವೇಗವಾಗಿ ಮುನ್ನಡೆಯದ ಅಭ್ಯರ್ಥಿಗಳನ್ನು ಮುಲಾಜಿಲ್ಲದೆ ಬದಲಾಯಿಸುತ್ತೇನೆ. ಆರೇಳು ಕ್ಷೇತ್ರಗಳಲ್ಲಿ ಘೋಷಿತ ಅಭ್ಯರ್ಥಿಗಳ ವೇಗ ನನಗೆ ತೃಪ್ತಿ ನೀಡಿಲ್ಲ. ಅವರನ್ನು ಬದಲಾವಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಅವರು ಇದೇ ವೇಳೆ ಹೇಳಿದರು.

ಪ್ರತಿ ಕ್ಷೇತ್ರವೂ ನನಗೆ ಮುಖ್ಯ, ನಾನು ಕಠಿಣ ನಿರ್ಧಾರ ಕೈಗೊಳ್ಳುವ ಬಗ್ಗೆ ಹಿಂದೆ ಸರಿಯುವುದಿಲ್ಲ. ಮುಲಾಜಿಲ್ಲದೆ ಕಠಿಣ ನಿರ್ಧಾರ ಕೈಗೊಳ್ಳುವ ಅವಕಾಶ ನನ್ನ ಮುಂದೆ ಮುಕ್ತವಾಗಿದೆ. ಕೆಲವರು ಬಹಳ ಉತ್ತವಾಗಿ ಕೆಲಸ ಮಾಡುತ್ತಿದ್ದಾರೆ, ನನಗೆ ಖುಷಿ ಇದೆ, ಕೆಲವರು ಉಪಯೋಗ ಇಲ್ಲ ಎಂದರು ಅವರು.

ಜಿಲ್ಲಾಧ್ಯಕ್ಷರಿಗೆ ಚುರುಕು:

ಕೆಲ ಜಿಲ್ಲೆಗಳಲ್ಲಿ ಎಂಟ್ಹತ್ತು ವರ್ಷಗಳಿಂದ ಅಧ್ಯಕ್ಷರಾದವರು ಇದ್ದಾರೆ, ಆದರೆ, ಒಬ್ಬ ಸೂಕ್ತ ಅಭ್ಯರ್ಥಿಯನ್ನು ಹುಡುಕಲು ಸಾಧ್ಯವಾಗದಿದ್ದರೆ ಹೇಗೆ? ಇನ್ನು ಯಾವ ಸಿಮೆಯ ಅಧ್ಯಕ್ಷಗಿರಿ ನಿಮ್ಮದು? ಇದನ್ನು ಸಹಿಸುವ ಪ್ರಶ್ನೆ ಇಲ್ಲ. ಈಗಾಗಲೇ ಆಯ್ಕೆಯಾಗಿರುವ ಅಭ್ಯರ್ಥಿಗಳ ಗೆಲುವಿಗೆ ಜಿಲ್ಲಾಧ್ಯಕ್ಷರು, ಜಿಲ್ಲೆಗಳ ಎಲ್ಲಾ ಮುಖಂಡರು ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪಕ್ಷದ ನಿರ್ಣಯವನ್ನು ಎಲ್ಲರೂ ಗೌರವಿಸಬೇಕು, ಅಶಿಸ್ತನ್ನು ಸಹಿಸಲ್ಲ ಎಂದು ನೇರ ಮಾತುಗಳಲ್ಲಿ ಹೇಳಿದರು ಮಾಜಿ ಮುಖ್ಯಮಂತ್ರಿಗಳು.

ಮತಗಟ್ಟೆ ಮಟ್ಟದಲ್ಲಿ ಕೆಲಸ ಮಾಡಬೇಕು, ಮನೆ ಮನೆಗೂ ಹೋಗಿ ಜನರಿಗೆ ನಮ್ಮ ಕಾರ್ಯಕ್ರಮಗಳ ಬಗ್ಗೆ ತಿಳಿಸಬೇಕು
ಗೆಲ್ಲಲು ಇರುವ ಪ್ರತಿ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದ ಅವರು, ಪ್ರಚಾರ ಹೇಗೆ ಮಾಡಬೇಕು ಎಂಬ ಬಗ್ಗೆ ಅಭ್ಯರ್ಥಿಗಳಿಗೆ ಟಿಪ್ಸ್ ನೀಡಿದರು.

ಅಲ್ಲದೆ, ರಾಜ್ಯದಲ್ಲಿ ಪಕ್ಷದ ನಾಯಕರು ಮಾಡಬೇಕಾದ ಪ್ರವಾಸದ ಬಗ್ಗೆ ಚರ್ಚೆ ನಡೆಯಿತು. ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಕೆಲ ಮಹತ್ವದ ವಿಚಾರಗಳನ್ನು ಪ್ರಸ್ತಾಪ ಮಾಡಿದರು.

ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪೂರ್, ಎನ್ ಎಂ ನಂಬಿ, ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಕೆ ಎನ್ ತಿಪ್ಪೇಸ್ವಾಮಿ, ರಾಮನಗರ ಕ್ಷೇತ್ರದ ಅಭ್ಯರ್ಥಿ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಎಲ್ಲ ಶಾಸಕರು, ಘೋಷಿತ ಅಭ್ಯರ್ಥಿಗಳು ಸಭೆಯಲ್ಲಿ ಭಾಗವಹಿಸಿದ್ದರು.


Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims