ವಿಧಾನಸಭೆ:ಜನಕಲ್ಯಾಣ ಹಾಗೂ ಆರ್ಥಿಕ ಸ್ಥಿರತೆಯನ್ನು ಸಾಧಿಸುವ ವಾಸ್ತವಿಕತೆಯ ಆಯವ್ಯಯ ನಮ್ಮದು…!

 


ವಿಧಾನಸಭೆ:ಜನಕಲ್ಯಾಣ ಹಾಗೂ ಆರ್ಥಿಕ ಸ್ಥಿರತೆಯನ್ನು ಸಾಧಿಸುವ ವಾಸ್ತವಿಕತೆಯ ಆಯವ್ಯಯ ನಮ್ಮದು…!


ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳ ಉತ್ತರ :

ಜನಕಲ್ಯಾಣ ಹಾಗೂ ಆರ್ಥಿಕ ಸ್ಥಿರತೆಯನ್ನು ಸಾಧಿಸುವ ವಾಸ್ತವಿಕತೆಯ ಆಯವ್ಯಯ ನಮ್ಮದು – ಸಿ ಎಂ ಬೊಮ್ಮಾಯಿ

IMG 20230223 WA0024

ಬೆಂಗಳೂರು, ಫೆಬ್ರವರಿ 23 : ಹಣಕಾಸಿನ ಇತಿಮಿತಿಗಳು ಹಾಗೂ ಅವಶ್ಯಕ ಖರ್ಚುಗಳನ್ನು ನಿಭಾಯಿಸುವುದರ ನಡುವೆ ಉತ್ತಮ ಬಜೆಟ್ ನೀಡುವ ಮೂಲಕ ಆರ್ಥಿಕ ಅಭಿವೃದ್ಧಿ ವೇಗ, ಜನಕಲ್ಯಾಣ , ಆರ್ಥಿಕ ಸ್ಥಿರತೆಯನ್ನು ಸಾಧಿಸುವ ವಾಸ್ತವಿಕತೆಯ ಆಯವ್ಯಯವನ್ನು ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದರು.

ಆಯವ್ಯಯ ಎಂದರೆ ರಾಜ್ಯದ ಹಣಕಾಸಿನ ಸ್ಥಿತಿ, ಜನರ ಆಶೋತ್ತರಗಳನ್ನು ಈಡೇರಿಸುವ ಯೋಜನೆಗಳು,, ಹಣಕಾಸಿನ ನಿರ್ವಹಣೆಯ ದಿಕ್ಸೂಚಿಯನ್ನು ತೋರಿಸುವ ಅಂದಾಜು. ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದರೆ, ರಾಜ್ಯದ ಆದಾಯ ಹೆಚ್ಚುತ್ತದೆ ಎಂದರು.

ಶೇ. 16 ರಷ್ಟು ಬಜೆಟ್ ಗಾತ್ರ ಹೆಚ್ಚಳ ರಾಜ್ಯ ಆರ್ಥಿಕ ಪ್ರಗತಿಯನ್ನು ಬಿಂಬಿಸುತ್ತದೆ :

2022-23ರಲ್ಲಿ 14,699 ಕೋಟಿ ವಿತ್ತೀಯ ಕೊರತೆ ಆಗಬಹುದೆಂದು ಅಂದಾಜಿಸಲಾಗಿತ್ತು. ಆದರೆ ಜವರಿವರೆಗೆ 5,996 ಕೋಟಿ ರೂ.ಗೆ ಕಡಿಮೆಗೊಳಿಸಲಾಗಿದೆ. 2023-24ರ ಆರ್ಥಿಕ ವರ್ಷದಲ್ಲಿ ಆದಾಯ ಹೆಚ್ಚಳವನ್ನು ಸಾಧಿಸುವ ಸಾಧ್ಯತೆ ಇದೆ. ಕರ್ನಾಟಕ ಆರ್ಥಿಕ ನಿರ್ವಹಣೆಯಲ್ಲಿ ಕ್ರಮಬದ್ಧತೆಯನ್ನು ಸಾಧಿಸಿದೆ. ಕೋವಿಡ್ ನಂತರದ ವರ್ಷದಲ್ಲಿ ರಾಜ್ಯದ ಆರ್ಥಿಕತೆ ಆದಾಯ ಹೆಚ್ಚಳವಾಗುತ್ತಿರುವುದು, ರಾಜ್ಯದ ಅಂತರ್ಗತವಾದ ಆರ್ಥಿಕ ಶಕ್ತಿ , ಜನರ ಪರಿಶ್ರಮದಿಂದ ಸಾಧ್ಯವಾಗಿರುವ ಕಾರಣ, ರಾಜ್ಯದ ಜನರನ್ನು ಅಭಿನಂದಿಸುತ್ತೇನೆ. ಈ ಬಾರಿಯ 3,09,182 ಕೋಟಿ ರೂ.ಗಳ ಬಜೆಟ್ ಮಂಡಿಸಲಾಗಿದೆ. ಕಳೆದ ಆಯವ್ಯಯಕ್ಕೆ ಹೋಲಿಸಿದರೆ ಶೇ.16 ರಷ್ಟು ಬಜೆಟ್ ಗಾತ್ರ ಹೆಚ್ಚಾಗಿದ್ದು, ರಾಜ್ಯ ಆರ್ಥಿಕ ಪ್ರಗತಿಯ ವೇಗ ಉನ್ನತ ಮಟ್ಟದಲ್ಲಾಗುತ್ತಿರುವುದನ್ನು ನಿರೂಪಿಸುತ್ತದೆ ಎಂದರು.

402 ಕೋಟಿ ರೂ. ಆದಾಯ ಹೆಚ್ಚಳ -ಆರ್ಥಿಕ ನಿರ್ವಹಣೆಯ ಪ್ರತಿಬಿಂಬ :

ಕೇಂದ್ರದ ತೆರಿಗೆಯಲ್ಲಿ ರಾಜ್ಯದ ತೆರಿಗೆ ಪಾಲು 37252 ಕೋಟಿ ರೂ. ಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ(ಕಳೆದ ಸಾಲಿಗಿಂತ ಶೇ. 25 ರಷ್ಟು ಹೆಚ್ಚಿನ ಗುರಿ). ಕೇಂದ್ರ ಸರ್ಕಾರದಿಂದ ಡಿಬಿಟಿ ಸೇರಿದಂತೆ ರಾಜ್ಯಕ್ಕೆ ಅನುದಾನ ಹೆಚ್ಚಾಗಿದೆ. 2023-24ರಲ್ಲಿ ಕರ್ನಾಟಕ ರಾಜ್ಯ 402 ಕೋಟಿ ಆದಾಯ ಹೆಚ್ಚಳವನ್ನು(revenue surplus) ಸಾಧಿಸಿರುವುದು, ರಾಜ್ಯದ ಆರ್ಥಿಕ ನಿರ್ವಹಣೆಯ ಪ್ರತಿಬಿಂಬವಾಗಿದೆ. ರಾಜಸ್ಥಾನ ಹಾಗೂ ಕೇರಳ ರಾಜ್ಯಗಳು ಆದಾಯ ಕೊರತೆ(revenue deficit)ಯನ್ನು ತೋರಿಸುತ್ತಿದೆ ಎಂದರು.

ಬಂಡವಾಳ ವೆಚ್ಚಕ್ಕಾಗಿ ಸಾಲದ ಬಳಕೆ :
ಒಟ್ಟು ಜಿಎಸ್ ಡಿಪಿಯ ಶೇ. 25 ರೊಳಗೆ ರಾಜ್ಯದ ಒಟ್ಟು ಸಾಲವಿರಬೇಕೆಂಬ ನಿಯಮವಿದ್ದು, ಈ ನಿಯಮವನ್ನು ಪಾಲಿಸಲಾಗಿರುವುದರಿಂದ ಈ ಬಾರಿಯ ಬಜೆಟ್ ಸರ್ಪ್ಲಸ್ ಬಜೆಟ್ ಆಗಿದೆ. ಕೋವಿಡ್ ಮುನ್ನ ಹಾಗೂ ನಂತರದ ಆರ್ಥಿಕತೆಯನ್ನು ಹೋಲಿಸುವುದು ಸೂಕ್ತವಲ್ಲ. ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಹಿಂಜರಿಕೆಯಾಯಿತು. ನನ್ನ ಅವಧಿಯಲ್ಲಿ ಹೆಚ್ಚಿನ ಸಾಲ ಪಡೆಯುವ ಅವಕಾಶವಿದ್ದರೂ, ಸಾಲದ ಮೊತ್ತವನ್ನು ಕೇವಲ 67 ಸಾವಿರ ಕೋಟಿ ಸೀಮಿತಗೊಳಿಸಿದ್ದೇನೆ. ಈ ಸಾಲವನ್ನು ಕೇವಲ ಬಂಡವಾಳ ವೆಚ್ಚಗಳಿಗೆ ಬಳಕೆಯಾಗಿದೆ ಎಂದರು.

IMG 20230223 WA0022

ಹೆಚ್ಚು ಸಾಲ ಮಾಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು :

ರಾಜ್ಯ ಸರ್ಕಾರ 65 ವರ್ಷಗಳ ಅವಧಿಯಲ್ಲಿ ಒಟ್ಟು1,30,000 ಕೋಟಿ ಸಾಲ ಪಡೆದಿರಬಹುದು. ಆದರೆ ಕಾಂಗ್ರೆಸ್ ನ ಸಿದ್ದರಾಮಯ್ಯ ಅವರ ಕಾಲದಲ್ಲಿ ಕೇವಲ 5 ವರ್ಷದ ಅವಧಿಯಲ್ಲಿ 1,30,000 ಕೋಟಿ ಸಾಲ ತೆಗೆದುಕೊಂಡರು. ಅವರ ಅವಧಿಯಲ್ಲಿ ಸಾಲ ಪಡೆಯಬಹುದಾದ ಗರಿಷ್ಟ ಮಿತಿಯಲ್ಲಿ ಶೇ. 82.3 ರಷ್ಟು ತೆಗೆದುಕೊಂಡರೆ, ನಮ್ಮ ಸರ್ಕಾರ ಕೇವಲ 71% ರಷ್ಟು ಅವಕಾಶವನ್ನು ಬಳಸಿಕೊಂಡಿದೆ. 2020-21 ರಲ್ಲಿ ಕೇಂದ್ರ ಸರ್ಕಾರದಿಂದ 5 % ವರೆಗೆ ಸಾಲ ಪಡೆಯಲು ಅವಕಾಶ ಕಲ್ಪಿಸಿದ್ದರೂ, ನಮ್ಮ ಸರ್ಕಾರ ಕೇವಲ ಶೇ. 3 ರಷ್ಟನ್ನು ದಾಟಿಲ್ಲ. ಆದ್ದರಿಂದ ನಮ್ಮ ಅವಧಿಯಲ್ಲಿ ಬಹಳ ಸಾಲ ಮಾಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಸಾಲವನ್ನು ತೀರಿಸುವ ಕ್ಷಮತೆ ನಮ್ಮ ಸರ್ಕಾರಕ್ಕಿದೆ ಎಂದರು.

ಗೃಹಿಣಿ ಶಕ್ತಿ ಯೋಜನೆಯ ಮೊತ್ತ ಸಾವಿರ ರೂ.ಗಳಿಗೆ ಹೆಚ್ಚಳ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಫೆಬ್ರವರಿ 23: ಗೃಹಿಣಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 500 ರೂ.ಗಳನ್ನು 1000 ರೂ.ಗಳಿಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
.

IMG 20230220 WA0108

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಜೆಟ್‍ನಲ್ಲಿ ಘೋಷಿಸಲಾಗಿದ್ದ ಒಂದು ಸಾವಿರ ಬಸ್ಸುಗಳನ್ನು 2000 ಕ್ಕೆ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದರು.

ಕಟ್ಟಡ ಕಾರ್ಮಿಕರ ಮಕ್ಕಳಿಗೆ ನಾಲ್ಕು ಸಾವಿರ ಶಿಶು ವಿಹಾರಗಳನ್ನು ಪ್ರಾರಂಭಿಸಲು ಬಜೆಟ್‍ನಲ್ಲಿ ಅನುದಾನ ಮೀಸಲಿಡಲಾಗಿದೆ. ನಿರುದ್ಯೋಗಿಗಳಿಗೆ ಬದುಕುವ ದಾರಿ ಕಲ್ಪಿಸಲಾಗಿದ್ದು, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಹಾಯಕರ ಗೌರವಧನವನ್ನು ಒಂದು ಸಾವಿರ ರೂ. ಗಳಿಗೆ ಹೆಚ್ಚಿಸಲಾಗಿದೆ. ಇ-ಕಾಮರ್ಸ್ ನಲ್ಲಿ ತೊಡಗಿರುವವರ ವಾಹನಗಳಿಗೆ 2 ಲಕ್ಷ ಜೀವಮ ವಿಮೆ ಹಾಗೂ ಅಪಘಾತ ವಿಮೆಯನ್ನು ಮೊದಲ ಬಾರಿಗೆ ಘೋಷಿಸಲಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಘೋಷಿಸಲಾಗಿರುವ ಎಲ್ಲಾ ಯೋಜನೆಗಳು ನಮ್ಮ ಸರ್ಕಾರದ ಸೂಕ್ಷ್ಮತೆಯನ್ನು ಬಿಂಬಿಸುತ್ತದೆ ಎಂದರು.

ರಾಯಚೂರಿನಲ್ಲಿ ಏಮ್ಸ್:
ರಾಯಚೂರಿನಲ್ಲಿ ಏಮ್ಸ್ ಮಾದರಿಯ ಆಸ್ಪತ್ರೆ ಸ್ಥಾಪನೆಗೆ ಬೇಡಿಕೆ ಇದೆ. ಈ ಬಗ್ಗೆ ಕೇಂದ್ರ ಸರ್ಕಾರ ಪುನರ್ ರಚನೆ ಮಾಡುತ್ತಿದೆ. ರಾಜ್ಯ ಸರ್ಕಾರವು ಭೂಮಿ, ಮೂಲಸೌಕರ್ಯದ ವೆಚ್ಚವನ್ನು ಭರಿಸುವುದಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಅವಶ್ಯಕತೆ ಹಾಗೂ ಸಂದರ್ಭಕ್ಕೆ ತಕ್ಕಂತೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಕಳೆದ ಬಾರಿ ಬಜೆಟ್ ನಂತರದಲ್ಲಿಯೂ ಘೋಷಣೆಗಳನ್ನು ಮಾಡಿರುವುದು ಇದಕ್ಕೆ ಸಾಕ್ಷಿ ಎಂದರು.

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation