ವಿದ್ಯುತ್ ಬಿಲ್ ಪಾವತಿ ನೆಪದಲ್ಲಿ ಗ್ರಾಹಕರನ್ನು ವಂಚಿಸುವ ಜಾಲ ಸಕ್ರಿಯ: ಭಯ ಬೇಡ, ಎಚ್ಚರವಿರಲಿ

 ವಿದ್ಯುತ್ ಬಿಲ್ ಪಾವತಿ ನೆಪದಲ್ಲಿ ಗ್ರಾಹಕರನ್ನು ವಂಚಿಸುವ ಜಾಲ ಸಕ್ರಿಯ: ಭಯ ಬೇಡ, ಎಚ್ಚರವಿರಲಿ

- ಪ್ರೀತಿ.ಟಿ. ಎಸ್



ಬೆಂಗಳೂರು: ಸೈಬರ್ ಕಳ್ಳರು ಅಮಾಯಕರನ್ನು ಬಲೆಗೆ ಬೀಳಿಸಲು ಪ್ರತಿನಿತ್ಯ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಈ ಹಿಂದೆ ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿ, ಯೋಧರ ಹೆಸರಲ್ಲಿ ಜನರಿಗೆ ಕರೆ ಮಾಡಿ, ಅವರ ಬ್ಯಾಂಕ್ ಖಾತೆಯ ಮಾಹಿತಿ ಪಡೆದು ವಂಚನೆ ಮಾಡಲಾಗುತ್ತಿತ್ತು. ಆದರೆ ಇಂತಹ ವಂಚನೆ ಬಗ್ಗೆ ಜನರು ಸ್ವಲ್ಪ ಜಾಗೃತರಾದ ಬೆನ್ನಲ್ಲೇ ಇದೀಗ ಹೊಸ ರೀತಿಯಲ್ಲಿ ಹಣ ಪೀಕಲು ವಿದ್ಯುತ್ ಬಿಲ್ ಪಾವತಿ ನೆಪದಲ್ಲಿ ಗ್ರಾಹಕರನ್ನು ವಂಚಿಸುತ್ತಿದ್ದಾರೆ.

ಆನ್ಲೈನ್ ಮೂಲಕ ಬೆಸ್ಕಾಂ ಗ್ರಾಹಕರನ್ನು ವಂಚಿಸಿ ಹಣ ವಸೂಲಿ ಮಾಡುತ್ತಿರುವ ಸೈಬರ್ ವಂಚಕರ ವಿರುದ್ಧ ಸೈಬರ್ ಕ್ರೆೈಂ ಠಾಣೆಗೆ ಬೆಸ್ಕಾಂ ದೂರು ನೀಡಿದ್ದರು ಕೂಡ ಗ್ರಾಹಕರು ಸೈಬರ್ ವಂಚಕರು ಬೀಸಿದ ಜಾಲಕ್ಕೆ ಬೀಳುತ್ತಿದ್ದಾರೆ. ಅಲ್ಲದೇ ಬೆಸ್ಕಾಂ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಗ್ರಾಹಕರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದರು, ಗ್ರಾಹಕರು ಸೈಬರ್ ವಂಚಕರ ಮೋಸದ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿದ್ದಾರೆ. ವಿದ್ಯುತ್ ಶುಲ್ಕ ಪಾವತಿಸುವಂತೆ ಅನಾಮಧೇಯ ಮೊಬೈಲ್ ಸಂಖ್ಯೆಗಳಿಂದ ಎಸ್.ಎಂ.ಎಸ್ ಬಂದಿರುವ ಕುರಿತು 3 ತಿಂಗಳಿAದ ಸುಮಾರು 80 ರಿಂದ 100 ಗ್ರಾಹಕರು ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

 *ಸೈಬರ್ ವಂಚಕರು ಜನರನ್ನು ಹೇಗೆ ವಂಚಿಸುತ್ತಿದ್ದಾರೆ?* 

ಸೈಬರ್ ವಂಚಕರು ಬೆಸ್ಕಾಂ ಹೆಸರಿನಲ್ಲಿ ಗ್ರಾಹಕರಿಗೆ ಎಸ್.ಎಂ.ಎಸ್ ಕಳುಹಿಸಿ, ವಿದ್ಯುತ್ ಬಿಲ್ ಪಾವತಿಸದಿದ್ದರೆ ಇಂದು ರಾತ್ರಿಯಿಂದಲೇ ನಿಮ್ಮ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆಯ ಸಂದೇಶ ಕಳುಹಿಸುತ್ತಿದ್ದು, ಗ್ರಾಹಕರು ಎಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ ಎಂಬ ಭಯದಿಂದ ಎಸ್.ಎಂ.ಎಸ್ ಬಂದ ಮೊಬೈಲ್ ಸಂಖ್ಯೆಗೆ ದೂರವಾಣಿ ಮಾಡುತ್ತಾರೆ. 

ಆ ಕಡೆಯಿಂದ ಕರೆ ಸ್ವೀಕರಿಸಿದ ವ್ಯಕ್ತಿ ಹಿಂದಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಸಂವಹನ (ಕನ್ನಡ ಬರುವುದಿಲ್ಲ) ಆರಂಭಿಸಿ ತಾನು ಎತಿಂಗಳಿಂದ ಸಿಟಿ ಆಫೀಸರ್ ಎಂದು ತನ್ನನ್ನು ಪರಿಚಯಿಸಿಕೊಂಡು, ಗ್ರಾಹಕರಿಗೆ ಎಲೆಕ್ಟಿçಸಿಟಿ ಬಿಲ್ ಬಾಕಿ ಇದ್ದು ಕೂಡಲೇ ಆನ್ಲೈನ್ ಮೂಲಕ ಪಾವತಿಸಿ ಎಂದು ಗ್ರಾಹಕರ ಮೊಬೈಲ್ ಗೆ ಲಿಂಕ್‌ನ್ನು ಎಸ್.ಎಂ.ಎಸ್ ಮಾಡುತ್ತಾರೆ. ಗ್ರಾಹಕರು ಆ ಲಿಂಕ್‌ಗೆ ಹೋಗಿ ತಮ್ಮ ಮೊಬೈಲ್ ಸಂಖ್ಯೆ ನಮೂದಿಸಿದ ಕೂಡಲೇ ಅವರ ನಂಬರ್‌ಗೆ ಓಟಿಪಿ ಬರುತ್ತದೆ. ಕರೆ ಸ್ವೀಕರಿಸಿದ ಸೈಬರ್ ವಂಚಕ ಓಟಿಪಿ ಪಡೆದು ಗ್ರಾಹಕರ ಖಾತೆಯಲ್ಲಿರುವ ಅಷ್ಟೂ ಹಣವನ್ನು ಒಂದೇ ಬಾರಿಗೆ ಲಪಟಾಯಿಸುತ್ತಾನೆ.

 *ಬೆಸ್ಕಾಂನಿಂದ ಎಚ್ಚರಿಕೆಯ ಸಂದೇಶ:* 

ಬೆಸ್ಕಾಂ ಎಂದಿಗೂ ಯಾವುದೇ ಮೊಬೈಲ್ ಸಂಖ್ಯೆಯಿಂದ ಗ್ರಾಹಕರಿಗೆ ಮೆಸೇಜ್‌ಗಳನ್ನು ಕಳಿಸುವುದಿಲ್ಲ. ಹಾಗೆಯೇ ಬಿಲ್ ಪಾವತಿಸಿ ಎಂದು ಗ್ರಾಹಕರಿಗೆ ದೂರವಾಣಿ ಕರೆ ಮಾಡುವುದಾಗಲಿ, ಎಸ್.ಎಂ.ಎಸ್ ಮಾಡುವುದಾಗಲೀ ಮಾಡುವುದಿಲ್ಲ. ಅಲ್ಲದೇ ಒಟಿಪಿ, ಪಾಸ್‌ವರ್ಡ್ ತಿಳಿಸುವಂತೆ ಕೇಳುವುದಿಲ್ಲ. ಬೆಸ್ಕಾಂ ಗ್ರಾಹಕರಿಗೆ ಬಿಲ್ ನೀಡಿದ ದಿನದಿಂದ ಬಿಲ್ ಪಾವತಿಗೆ 15 ದಿನಗಳ ಕಾಲಾವಕಾಶ ಇರುತ್ತದೆ. ಬಿಲ್ ಕಟ್ಟಲು ನಿಗದಿತ ಕಾಲವಧಿ ಮುಗಿದ ನಂತರವೇ ಬೆಸ್ಕಾಂ ಗ್ರಾಹಕರಿಗೆ ಮಾಹಿತಿ ನೀಡಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತದೆ. ಒಂದು ವೇಳೆ ಬೆಸ್ಕಾಂ ಹೆಸರಿನಲ್ಲಿ ಒಟಿಪಿ, ಪಾಸ್‌ವರ್ಡ್ ಕೇಳಿದರೆ ಅದು ಖಂಡಿತವಾಗಿಯೂ ಮೋಸದ ಜಾಲವೇ ಆಗಿರುತ್ತದೆ. ಬೆಸ್ಕಾಂ ಹೆಸರಲ್ಲಿ ನಕಲಿ ಫೋನ್ ಕಾಲ್, ಮೆಸೆಜ್‌ಗಳು ಬರಬಹುದು. ದಯವಿಟ್ಟು ಇಂತಹ ವಂಚನೆಗೆ ಒಳಗಾಗದೆ ಎಚ್ಚರದಿಂದಿರಿ.

 *ಸೈಬರ್ ವಂಚನೆ ತಡೆಯಲು ನಾವೇನು ಮಾಡಬೇಕು:* 

* ಅಪರಿಚಿತರಿಗೆ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡಬೇಡಿ.

* ಮಕ್ಕಳು ನಿಮ್ಮ ಮೊಬೈಲ್‌ನ್ನು ಬಳಸದಂತೆ ಎಚ್ಚರವಹಿಸಿ.

* ನಿಮ್ಮ ಮೊಬೈಲ್ ಬ್ಯಾಂಕಿಂಗ್ ಆ್ಯಪ್‌ಗಳಿಗೆ ಊಹಿಸಲು ಅಸಾಧ್ಯವಾಗುವ ಪಾಸ್‌ ವರ್ಡ್ ಗಳನ್ನು ಬಳಸಿ.

* ಅಪರಿಚಿತ ಮೂಲಗಳಿಂದ ಆ್ಯಪ್‌ಗಳನ್ನು ಡೌನ್‌ಲೌಡ್ ಮಾಡಿಕೊಳ್ಳದಿರಿ.

* ಯಾವುದೇ ಕಾರಣಕ್ಕೂ ನಿಮ್ಮ ಬ್ಯಾಂಕ್ ಖಾತೆ, ಎಟಿಎಂ ಪಿನ್ ಕೇಳಿದರೆ, ಮಾಹಿತಿ ನೀಡಬೇಡಿ.

* ಅನಧಿಕೃತವಾಗಿ ಸ್ವೀಕರಿಸಿದ ಲಿಂಕ್‌ಗಳನ್ನು ಎಂದಿಗೂ ಕ್ಲಿಕ್ ಮಾಡಬಾರದು.

* ಲಿಂಕ್ ಅಧಿಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಯುಆರ್‌ಎಲ್ ನ್ನು ಸರಿಯಾಗಿ ಪರಿಶೀಲಿಸಿ.

 *ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಲು ಗ್ರಾಹಕರು ಏನು ಮಾಡಬೇಕು:* 

ಇಂತಹ ಸಂದೇಶಗಳನ್ನು ಹೆಚ್ಚಾಗಿ ಸ್ಕ್ಯಾಮರ್‌ಗಳು ಕಳುಹಿಸುತ್ತಾರೆ. ಅಧಿಕೃತ ನ್ಯೂಸ್ ಮೆಸೇಜ್‌ಗಳು ಯಾವುದೇ ಅಕ್ಷರ ದೋಷ ಹೊಂದಿರುವುದಿಲ್ಲ. ಫೇಕ್ ಮೆಸೇಜ್‌ಗಳು ಹೆಚ್ಚು ದೋಷಗಳು, ಅಕ್ಷರ ದೋಷಗಳನ್ನು ಹೊಂದಿರುವುದರಿಂದ ಎಚ್ಚರ ವಹಿಸಿ ಓದಿ. ಅಲ್ಲದೇ ಗ್ರಾಹಕರು ವಿದ್ಯುತ್ ಬಿಲ್‌ಗಳನ್ನು ಬೆಸ್ಕಾಂ ಸೂಚಿಸಿರುವ ಪಾವತಿ ಕೇಂದ್ರಗಳಾದ ಬೆಂಗಳೂರು ಒನ್, ಬೆಸ್ಕಾಂ ಮಿತ್ರ ಆ್ಯಪ್, ಬೆಸ್ಕಾಂ ಕಚೇರಿ ಮತ್ತು ಬೆಸ್ಕಾಂ ವೆಬ್‌ಸೈಟ್ ಮೂಲಕವೇ ಹಣ ಪಾವತಿಸಿ. ಯಾವುದೇ ಸೈಬರ್ ವಂಚನೆಗೆ ಒಳಗಾದಲ್ಲಿ ಸೈಬರ್ ಸಹಾಯವಾಣಿ 112 ಅಥವಾ ಬೆಸ್ಕಾಂನ 24*7 ಸಹಾಯವಾಣಿ 1912ಕ್ಕೆ ಕೂಡಲೇ ಕರೆಮಾಡಿ.

ಬೈಟ್:

ಈಗಾಗಲೇ ಗ್ರಾಹಕರಿಗೆ ಮಾಧ್ಯಮದ ಮೂಲಕ ಸೈಬರ್ ವಂಚನೆಯ ಕುರಿತು ಹಲವು ಬಾರಿ ಎಚ್ಚರಿಸಲಾಗಿದೆ. ಆದರೂ ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ತಮ್ಮ ಹಣ ಕಳೆದುಕೊಳ್ಳುತ್ತಿದ್ದಾರೆ. ಬೆಸ್ಕಾಂ ಇಲಾಖೆಯಿಂದ ವಿದ್ಯುತ್ ಪಾವತಿ ಕುರಿತು ಯಾವುದೇ ಎಸ್.ಎಂ.ಎಸ್ ಬರುವುದಿಲ್ಲ. ಈ ರೀತಿಯ ಮೆಸೇಜ್‌ಗಳಿಗೆ ಪ್ರತಿಕ್ರಿಯಿಸಬೇಡಿ. ಹಾಗೂ ಎಸ್.ಎಂ.ಎಸ್ ಬಂದ ಮೊಬೈಲ್‌ಗೆ ಕರೆ ಮಾಡಲು ಹೋಗಬೇಡಿ ಎಂದು ಬೆಸ್ಕಾಂ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಎಚ್ಚರಿಕೆ ನೀಡಿದ್ದಾರೆ.

ಬೆಸ್ಕಾಂ ಇಲಾಖೆಯ ಸಿಬ್ಬಂದಿಗಳು ತಮ್ಮ ಗ್ರಾಹಕರೊಂದಿಗೆ ಕನ್ನಡ ಭಾಷೆಯನ್ನು ಹೊರತುಪಡಿಸಿ ಅನ್ಯ ಭಾಷೆಯಲ್ಲಿ ವ್ಯವಹರಿಸುವುದಿಲ್ಲ. ಹಾಗಾಗಿ ಗ್ರಾಹಕರು ಕನ್ನಡ ಹೊರತುಪಡಿಸಿ ಅನ್ಯ ಭಾಷೆಯಲ್ಲಿ ವ್ಯವಹರಿಸುವ ಕರೆಗಳಿಗೆ ಸ್ಪಂದಿಸದಿರಿ ಎಂದು ಬೆಸ್ಕಾಂ ಪ್ರಧಾನ ವ್ಯವಸ್ಥಾಪಕರಾದ ಎಸ್.ಆರ್.ನಾಗರಾಜ ಅವರು ತಿಳಿಸಿದ್ದಾರೆ

ಪ್ರೀತಿ ಟಿ ಎಸ್

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims